ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬ್ಯಾಂಕುಗಳು ಮತ್ತು ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ಮಾಡುವುದನ್ನು ತಡೆ ಒಡ್ಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬ್ಯಾಂಕುಗಳು ಮತ್ತು ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ಮಾಡುವುದನ್ನು ತಡೆ ಒಡ್ಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ತಾಲೂಕು ಆಡಳಿತದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆ ನಂತರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಕೃಷಿ ಪಂಪ್ ಶೆಟ್ ಗಳಿಗೆ ದಿನಕ್ಕೆ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಹೇಮಾವತಿ ನಾಲೆಯಿಂದ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳ ಕೆರೆಗಳಿಗೆ ತಾತ್ಕಾಲಿಕವಾಗಿ ತಲಾ ಅರ್ಧ ಟಿಎಂಸಿ ನೀರು ಹರಿಸಲು ಒತ್ತಾಯಿಸಿದರು ಹೋಬಳಿಗೊಂದು ಗೋಶಾಲೆ ತೆರೆಯಬೇಕು ಮೇವು ಖರೀದಿಸಿ ಜಾನುವಾರುಗಳಿಗೆ ಒದಗಿಸಬೇಕು ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು ಬರ ಪರಿಹಾರವಾಗಿ ಎಕರೆಗೆ 20 ಸಾವಿರ ನೀಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಜನರಿಗೆ ಉಚಿತವಾಗಿ ಅಕ್ಕಿ,ರಾಗಿ ಹಂಚಿಕೆ ಜೊತೆಗೆ ಗೋಧಿ, ರವೆ, ಅಡುಗೆ ಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತರಿಯನ್ನು ಬಲಪಡಿಸಿ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ನೀಡಬೇಕು. ಹಾಲಿನ ದರ ಲೀ.ರು.60 ನೀಡಬೇಕು. ಹತ್ತಿ ಬೀಜದ ಕಂಪನಿಗಳು ಎರಡು ವರ್ಷಗಳಿಂದ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಪಾವತಿಸಬೇಕು ಹುಣಸೆ ಅಭಿವೃದ್ಧಿ ಮಂಡಳಿ ರಚಿಸಿ ಹುಣಸೆ ಬೆಳೆಗಾರರನ್ನು ರಕ್ಷಿಸಬೇಕು. ಸರ್ವ ಸಮಸ್ಯೆಯನ್ನು ಬಗೆಹರಿಸಬೇಕು. ಬೆಳೆ ವಿಮೆ ಹಣವನ್ನು ತುಂಬಿರುವ ಎಲ್ಲಾ ರೈತರಿಗೆ ವಿಮಾ ಪಾವತಿಸಬೇಕು ತಾಲೂಕಿನಲ್ಲಿ ಅನುಷ್ಠಾನವಾಗಿರುವ ಎತ್ತಿನಹೊಳೆ ಯೋಜನೆಯನ್ನು ದೊಡ್ಡೇರಿ ಹೋಬಳಿಗೂ ವಿಸ್ತರಿಸಿ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ರೈತ ಸಂಘದ ಎಲ್ಲಾ ಹೋರಾಟಗಳಿಗೆ ವಕೀಲರ ಸಂಘ ಸದಾ ಬೆಂಬಲ ನೀಡುತ್ತದೆ. ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳ ರೈತರಿಗೆ ಹೈನೋದ್ಯಮ ಪ್ರಮುಖ ಉದ್ಯೋಗವಾಗಿದ್ದು, ಹಾಲು ಉತ್ಪಾದಕರನ್ನು ರಕ್ಷಿಸಲು ಸರ್ಕಾರದ 5 ರು ಪ್ರೋತ್ಸಾಹಧನ, ಹೊರತು ಪಡಿಸಿ 1 ಲೀ.ಹಾಲಿಗೆ 40 ರು. ನೀಡಬೇಕು. ಪಶು ಆಹಾರ ಶೇ.50ರಷ್ಠು ರಿಯಾಯತಿ ದರದಲ್ಲಿ ಕೊಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಂದಿನಿ, ಇಓ ಉತ್ತಮ್, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ದೊಡ್ಡ ಮಾಳಯ್ಯ, ನಾಗರಾಜು, ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ, ನಾಗರತ್ನಮ್ಮ ಡಿ.ಆರ್ ರಾಜಶೇಖರ್, ಲಕ್ಷ್ಮಣಗೌಡ, ರಂಗ ಹನುಮಯ್ಯ ವಕೀಲರ ಸಂಘದ ಕಾರ್ಯದರ್ಶಿ ನರಸೇಗೌಡ ಪದಾಧಿಕಾರಿಗಳಾದ ದೇವರಾಜು,ವೀರ ಕ್ಯಾದಪ್ಪ, ಪಾಂಡುರಂಗಪ್ಪ, ಎಚ್.ವಿ ಮಂಜುನಾಥ್, ಅಶೋಕ್, ಮತ್ತಿತರರು ಹಾಜರಿದ್ದರು.