ಸಾರಾಂಶ
ಚನ್ನಪಟ್ಟಣ: ನಗರದ ಹತ್ತನೇ ವಾರ್ಡ್‌ನಲ್ಲಿ ಚರಂಡಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಚರಂಡಿಗೆ ಗುಂಡಿ ತೋಡಿ ಎರಡು ವಾರ ಕಳೆದರೂ ಅದನ್ನು ಮುಚ್ಚದ ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾದ ಸಂಬಂಧಿಸಿದ ಗುತ್ತಿಗೆದಾರ ನಾಪತ್ತೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಗುತ್ತಿಗೆದಾರ ಇರಲಿ, ಮೇಸ್ತ್ರಿ ಕೂಡ ಕಾಮಗಾರಿ ನಡೆಯುತ್ತಿರುವ ಸ್ಥಳದತ್ತ ಸುಳಿಯುದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾರ್ಡ್‌ನ ಪ್ರಮುಖ ಬೀದಿ, ಓಣಿಗಳು ಹಾಗೂ ಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿಗಳ ಗುಂಡಿ ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಆಯಾ ಮನೆಯವರು ಚರಂಡಿ ಮೇಲೆ ಓಡಾಡುವುದಕ್ಕೆ ಕಷ್ಟಪಡುವಂತಾಗಿದೆ. ಕಳಪೆ ಕಾಮಗಾರಿ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಗರಸಭೆ ಎಇಇಗೆ ಲಿಖಿತವಾಗಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ನಾಗರಿಕರ ಅಹವಾಲು ಆಲಿಸುವುದರ ಬದಲು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸದಿದ್ದಲ್ಲಿ ನಗರಸಭೆ ಆಡಳಿತ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಹತ್ತನೇ ವಾರ್ಡ್ ನಿವಾಸಿಗಳು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.