ಹೊಸಪೇಟೆಯ ರೈಲ್ವೆ ಮೇಲ್ಸುತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

| Published : Feb 07 2024, 01:53 AM IST

ಹೊಸಪೇಟೆಯ ರೈಲ್ವೆ ಮೇಲ್ಸುತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲ್ಸೇತುವೆಗೆ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ, ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು.

ಹೊಸಪೇಟೆ: ನಗರದ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಜಯನಗರ ರೈಲ್ವೆ ಹೋರಾಟ ಕ್ರಿಯಾಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಮೇಲ್ಸೇತುವೆ ನಿರ್ಮಾಣಕ್ಕೆ ಕಳೆದ ವರ್ಷ 2022ರಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿ ಆರಂಭವಾಗಿ ಕಳೆದ 9 ತಿಂಗಳಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆಗೆ ಅಗತ್ಯವಾದ ಅನುದಾನವು ಕಳೆದ ವರ್ಷದಲ್ಲಿಯೇ ಬಿಡುಗಡೆಯಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ₹7.5 ಕೋಟಿ ಹಂಚಿಕೆ ಮಾಡಲಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಇದ್ದರೂ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸಪೇಟೆ ಜಿಲ್ಲಾ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು, ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ವೀಕ್ಷಣೆಗೆ ದೇಶ, ವಿದೇಶಗಳಿಂದ ಪ್ರತಿನಿತ್ಯ ಆಗಮಿಸುವ ಅಸಂಖ್ಯಾತ ಪ್ರವಾಸಿಗರು ಈ ಮಾರ್ಗದ ರೈಲ್ವೆ ಗೇಟಿನ ಮೂಲಕ ಹಾದು ಹೋಗುತ್ತಾರೆ. ಆದರೆ, ಪ್ಯಾಸೆಂಜರ್ ಹಾಗೂ ಗೂಡ್ಸ್‌ ಗಾಡಿಗಳ ನಿರಂತರ ಸಂಚಾರದಿಂದ ದಿನದ ಬಹುಪಾಲು ಅವಧಿಯಲ್ಲಿ ರೈಲ್ವೆ ಗೇಟ್ ಮುಚ್ಚುವುದರಿಂದ ಸಕಾಲದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಈ ರೈಲ್ವೆ ಮಾರ್ಗವು ಶಿವಮೊಗ್ಗ- ರಾಯಚೂರು ರಾಜ್ಯ ಹೆದ್ದಾರಿಯಲ್ಲಿದ್ದು, ನಿತ್ಯ ಸಾವಿರಾರು ವಾಹನಗಳು ಈ ರೈಲ್ವೆಗೇಟ್ ಮೂಲಕ ಸಂಚರಿಸುತ್ತವೆ.

ರೈಲ್ವೆ ಗೇಟಿನ ಪೂರ್ವ ದಿಕ್ಕಿನಲ್ಲಿರುವ ಮಲಪನಗುಡಿ, ಕಮಲಾಪುರ, ಗಾಳೆಮ್ಮನಗುಡಿ, ಕಡ್ಡಿರಾಂಪುರ, ಇತರೆ ಗ್ರಾಮಗಳಿಂದ ತ್ವರಿತ ವೈದ್ಯಕೀಯ ಚಿಕಿತ್ಸೆಗೆ ಹೊಸಪೇಟೆಗೆ ಆಗಮಿಸುವ ಗ್ರಾಮಸ್ಥರು ರೈಲ್ವೆ ಗೇಟ್ ಮುಚ್ಚಿದ ಸಂದರ್ಭದಲ್ಲಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೇ ಅನೇಕರು ಮೃತಪಟ್ಟ ಘಟನೆಗಳು ನಡೆದಿವೆ. ಮೇಲ್ಸೇತುವೆಗೆ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ, ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಮಹೇಶ್ ಕುಡತಿನಿ, ಪ್ರಭಾಕರ್‌ ಪಿ., ನಜೀರ್‌ಸಾಹೇಬ್, ಎಚ್. ಮಹೇಶ್, ಆರ್.ಟಿ. ಶರಣಗೌಡ, ಎಚ್. ತಿಪ್ಪೇಸ್ವಾಮಿ, ಎಸ್.ಎಸ್. ಸಣ್ಣಕಾಸಿ, ಟಿ.ಆರ್. ತಿಪ್ಪೇಸ್ವಾಮಿ, ಡಿ. ರಾಮಕೃಷ್ಣ, ಜಗದೀಶ್‌ ಎ.ಎಲ್., ಗೋಪಿನಾಥ, ಡಾ. ಎಂ.ಕೆ. ಲಕ್ಷ್ಮಣ, ಎಲ್. ರಮೇಶ್, ಕಂಪ್ಲಿ ಚಂದ್ರಪ್ಪ, ಎಸ್.ಜಿ. ಶ್ರೀನಿವಾಸ್, ಎಂ. ಲೋಕನಾಥನ್, ಜೆ. ವರುಣ್, ಎಲ್. ರಮೇಶ್, ವೈ. ಶೇಖರ್, ಡಿ. ವಿಶ್ವನಾಥ ಕೌತಾಳ್, ಪೀರನ್‌ಸಾಬ್ ಮತ್ತಿತರರಿದ್ದರು.