ಎಲ್ಲ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಸ್ಟೆಲ್ ಗಳಿಗೆ ಪ್ರವೇಶ ಎಂದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಧಾರವಾಡ: ರಾಜ್ಯದ ಎಲ್ಲ ವಸತಿ ನಿಲಯಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರವೇಶ ನೀಡಬೇಕು ಎಂಬ ಆದೇಶದಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಸತಿ ನಿಲಯಗಳಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿ ವರ್ಷ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಉನ್ನತ ಶಿಕ್ಷಣಕ್ಕಾಗಿ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾಕಾಶಿ ಧಾರವಾಡಕ್ಕೆ ಆಗಮಿಸುತ್ತಾರೆ. ಪ್ರಸ್ತುತ ಲಭ್ಯವಿರುವ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಸಂಖ್ಯೆ ಮತ್ತು ಸಾಮರ್ಥ್ಯ ಸಾಲದಾಗಿದೆ. ಇದರ ಪರಿಣಾಮವಾಗಿ ಅನೇಕ ಅರ್ಹ ವಿದ್ಯಾರ್ಥಿಗಳು ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ವಸತಿಗಳ ಮೇಲೆ ಅವಲಂಬಿತರಾಗಿ ಆರ್ಥಿಕ ಬಾಧೆ ಅನುಭವಿಸುವಂತಾಗಿದೆ.

ಈ ಹಿನ್ನೆಲೆ ವಿದ್ಯಾರ್ಥಿಗಳ ಹಿತೈದೃಷ್ಟಿಯಿಂದ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚುವರಿ ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ತಕ್ಷಣ ನಿರ್ಮಿಸಬೇಕು. ಸಮಾನ ಶೈಕ್ಷಣಿಕ ಅವಕಾಶಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಲಭಿಸಬೇಕೆಂಬ ಉದ್ದೇಶದಿಂದ ಸರ್ಕಾರವು ತ್ವರಿತವಾಗಿ ಈ ವಿಷಯದಲ್ಲಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾಧ್ಯಕ್ಷ ಹನುಮಂತ ದಾಸರ, ನ್ಯಾಯವಾದಿ ಅರುಣ್ ಮೂಡಿ, ನಾಗರಾಜ ಎತ್ತಿನಮನೆ, ರೇಣುಕಾ ಕಲ್ಯಾಣಿ ಇದ್ದರು.