ಮೋಟೆಬೆನ್ನೂರ ಗ್ರಾಮದ ಹೊರವಲಯದಲ್ಲಿರುವ (ಕೋಡಿಹಳ್ಳಿ ರಸ್ತೆ) ರೈಲ್ವೆ ಮಾರ್ಗಕ್ಕೆ ಹೊಂದಿಕೊಂಡಿರುವ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಿಕೊಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು.
ಬ್ಯಾಡಗಿ: ಮೋಟೆಬೆನ್ನೂರ ಗ್ರಾಮದ ಹೊರವಲಯದಲ್ಲಿರುವ (ಕೋಡಿಹಳ್ಳಿ ರಸ್ತೆ) ರೈಲ್ವೆ ಮಾರ್ಗಕ್ಕೆ ಹೊಂದಿಕೊಂಡಿರುವ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಿಕೊಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಮೂಲಕ ಸಂಸದ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಮೋಟೆಬೆನ್ನೂರಿನ ರೈಲ್ವೆ ಹಳಿ ಎಡಭಾಗದ ಸರ್ವೇ ನಂ.42ರಿಂದ 133ರ ವರೆಗೆ ಹಾಗೂ ಬಲಭಾಗದ ಸರ್ವೇ ನಂ.45ರಿಂದ 210ರ ವರೆಗೆ ಹಾಲಿ ಮಣ್ಣಿನ ರಸ್ತೆಯಿದೆ. ಸದರಿ ರಸ್ತೆ ಬಳಸಿಕೊಂಡು ಕಳೆದ 60 ವರ್ಷಗಳಿಂದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುತ್ತಾರೆ. ಇತ್ತೀಚೆಗೆ ರೈಲ್ವೆ ಮಾರ್ಗವು ದ್ವಿಪಥವಾಗಿ ಪರಿವರ್ತನೆ ಮಾಡುವ ವೇಳೆಯಲ್ಲಿ ಸದರ ರಸ್ತೆ ದುರಸ್ತಿಯಾಗಿಲ್ಲ. ಎತ್ತು, ಚಕ್ಕಡಿ ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಕೂಡಲೇ ಈ ರಸ್ತೆಯನ್ನು ಕಾಂಕ್ರಿಟ್ ಮಾಡುವಂತೆ ಆಗ್ರಹಿಸಿದರು.ಕೇವಲ 500 ಮೀಟರ್ ವರೆಗೆ ಮಾತ್ರ ಕಾಂಕ್ರಿಟ್ ರಸ್ತೆ : ಇಂದುಧರ ರುದ್ರದೇವರಮಠ ಮಾತನಾಡಿ, ರೈಲ್ವೆ ಬ್ರಿಡ್ಜ ಕೇವಲ 500 ಮೀ. ವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು ಇನ್ನುಳಿದ ಭಾಗದಲ್ಲಿ ಸಂಚಾರ ದುಸ್ತರವಾಗಿದೆ. ಇದರ ಪರಿಣಾಮ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅಡಚಣೆಯಾಗಿದೆ. ಕಳೆದ ಬಾರಿ ಕೇಂದ್ರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರಾಮಕ್ಕೆ ಆಗಮಿಸಿದ ವೇಳೆ ಖುದ್ದಾಗಿ ರಸ್ತೆ ವೀಕ್ಷಣೆ ಮಾಡಿದ್ದಲ್ಲದೇ ಆದಷ್ಟು ರಸ್ತೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತು ಈಡೇರದೇ ಕೇವಲ ಭರವಸೆಯಾಗಿಯೇ ಉಳಿದಿದೆ. ಇದರಿಂದ ರೈತರು ನಿತ್ಯವೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ರೈಲ್ವೆ ಹಳಿ ಪಕ್ಕದ ಸಂಪೂರ್ಣ ದಾರಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು. ಒಂದು ವೇಳೆ ತಪ್ಪಿದಲ್ಲಿ ಏ. 6ರಂದು ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಸಿದರು.
ಈ ವೇಳೆ ಬಸವರಾಜ ಚಂದ್ರಪ್ಪನವರ, ಪ್ರದೀಪ ಮಲ್ಲೂರ, ಮಾಲತೇಶ ಮೈಲಾರ, ನಿಂಗಪ್ಪ ಅಂಗರಗಟ್ಟಿ, ಶಿವಪ್ಪ ಮತ್ತೂರ, ದಾನಪ್ಪ ಬಳ್ಳಾರಿ, ಸುಭಾಸ ಬನ್ನಿಹಟ್ಟಿ, ಸುರೇಶ ಹಿತ್ತಲಮನಿ, ರಮೇಶ ಹೊಳಲ, ಮುತ್ತಪ್ಪ ಆನವೇರಿ, ಸೇರಿದಂತೆ ಹಲವರು ಉಪ ಸ್ಥಿತರಿದ್ದರು.