ಮಹಾಲಿಂಗಪುರಕ್ಕೆ ತಕ್ಷಣ ಬಸ್ ಡಿಪೋ ನಿರ್ಮಿಸಬೇಕು ಹಾಗೂ ಅಗತ್ಯವಿರುವ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಲಿಂಗಪುರಕ್ಕೆ ತಕ್ಷಣ ಬಸ್ ಡಿಪೋ ನಿರ್ಮಿಸಬೇಕು ಹಾಗೂ ಅಗತ್ಯವಿರುವ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಒತ್ತಾಯಿಸಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೬, ೭ ಮತ್ತು ೮ ಗಂಟೆಯ ಸಮಯದಲ್ಲಿ ಅಥಣಿ, ಹುಬ್ಬಳ್ಳಿ, ಹುಕ್ಕೇರಿ, ಬೆಳಗಾವಿ, ನಿಪ್ಪಾಣಿ ಸೇರಿ ಹಲವು ಪ್ರಮುಖ ಮಾರ್ಗಗಳಿಗೆ ಸಮರ್ಪಕ ಬಸ್‌ಗಳಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು, ಪ್ರಯಾಣಿಕರು ನಿತ್ಯ ಬಸ್‌ಗಾಗಿ ಪರದಾಡುವಂತಾಗಿದೆ. ಪಟ್ಟಣಕ್ಕೆ ಇನ್ನೂ ಸುಮಾರು ೩೪ ಬಸ್‌ಗಳ ಅಗತ್ಯವಿದೆ. ಬೆಳಗ್ಗೆ ಮಾತ್ರವಲ್ಲದೆ ಸಂಜೆ ವೇಳೆಯಲ್ಲಿಯೂ ಬಸ್‌ಗಳ ಕೊರತೆ ಎದುರಾಗಿದ್ದು, ರಾತ್ರಿ ೮ ಗಂಟೆಯ ನಂತರ ನಗರದಿಂದ ಬೇರೆಡೆಗೆ ತೆರಳಲು ಸಮರ್ಪಕ ಬಸ್ ಸೌಲಭ್ಯವಿಲ್ಲದಿರುವುದು ಸಾರ್ವಜನಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಬಸ್ ಡಿಪೋ ನಿರ್ಮಾಣ ಹಾಗೂ ಬೆಳಗಾವಿ, ಅಥಣಿ ಸೇರಿದಂತೆ ಪ್ರಮುಖ ಮಾರ್ಗಗಳಿಗೆ ಬೆಳಗ್ಗೆ ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಬಾಗಲಕೋಟೆ ಡಿಟಿಒ ಸೇರಿದಂತೆ ಸಂಬಂಧಿಸಿದ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸಹಾಯಕ ಆಯುಕ್ತರು ಹಾಗೂ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಕ್ರಮವಾಗಿಲ್ಲ ಎಂದು ಹೋರಾಟ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಓಬಿರಾಯನ ಕಾಲದ ವ್ಯವಸ್ಥೆಯನ್ನೇ ಮುಂದುವರಿಸುವುದು ಸಮಂಜಸವಲ್ಲ. ಮಹಾಲಿಂಗಪುರಕ್ಕೆ ಪ್ರತ್ಯೇಕ ಬಸ್ ಡಿಪೋ ನಿರ್ಮಾಣವಾದರೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಡಿಪೋ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಹೋರಾಟ ಸಮಿತಿಯ ಸಿದ್ದಪ್ಪ ಶಿರೋಳ, ಹನುಮಂತ ಜಮಾದಾರ, ವೀರೇಶ ಆಸಂಗಿ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಡಾ.ಪ್ರಭಾಕರ ಕುಳ್ಳೊಳಿ, ಡಿ.ವಿ. ನಾಗನೂರ, ರಫೀಕ್ ಮಾಲದಾರ ಇತರರು ಇದ್ದರು.