ವಿಜಯನಗರ ಜಿಲ್ಲೆ ರಚನೆಯಾಗಿ 5 ವರ್ಷಗಳಾದರೂ ಜಿಲ್ಲಾ ಕೇಂದ್ರದಲ್ಲಿ ಅಗತ್ಯವಾಗಿರುವ ಕೆಲವು ಕಚೇರಿಗಳು ಹಾಗೂ ಸಿಬ್ಬಂದಿ ಇಲ್ಲ

ಹೊಸಪೇಟೆ: ಜಿಲ್ಲೆ ಪ್ರಜಾ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಸರ್ಕಾರದ ಆಡಳಿತ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಸೇವೆ ಮತ್ತು ಸೌಲಭ್ಯ ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಶ್ಲಾಘನೀಯ. ಮುಖ್ಯವಾಗಿ ಸರ್ಕಾರಿ ಸೇವೆ ಪಡೆಯಲು ಜನರು ಗ್ರಾಪಂ, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಸಚಿವರು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಜಾಸೇವೆಯ ಅಭಿಯಾನವು ಅತ್ಯಂತ ಅನುಕೂಲಕರವಾಗಿದೆ. ಆದರೆ ಸರ್ಕಾರ ಕೇವಲ ಹೋಬಳಿ ಮತ್ತು ತಾಲೂಕು ಮಟ್ಟಕ್ಕೆ ಈ ವ್ಯವಸ್ಥೆ ಸೀಮಿತಗೊಳಿಸಿರುವುದು ಸರಿಯಲ್ಲ. ಜಿಲ್ಲಾ ಕೇಂದ್ರಗಳಲ್ಲಿ ತಿಂಗಳ ಮೊದಲ ಶನಿವಾರ ಪ್ರಜಾಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಅಗತ್ಯ. ಜಿಲ್ಲಾ ಮಟ್ಟದ ಸಭೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವುದರಿಂದ ಜನರ ಬೇಡಿಕೆಗಳು ತ್ವರಿತವಾಗಿ ಇತ್ಯರ್ಥವಾಗಲು ಸಾಧ್ಯವಾಗುತ್ತದೆ.

ವಿಜಯನಗರ ಜಿಲ್ಲೆ ರಚನೆಯಾಗಿ 5 ವರ್ಷಗಳಾದರೂ ಜಿಲ್ಲಾ ಕೇಂದ್ರದಲ್ಲಿ ಅಗತ್ಯವಾಗಿರುವ ಕೆಲವು ಕಚೇರಿಗಳು ಹಾಗೂ ಸಿಬ್ಬಂದಿ ಇಲ್ಲ. ಇದರಿಂದ ನೂತನ ಜಿಲ್ಲೆಯ ರಚನೆಯ ಮೂಲ ಉದ್ದೇಶವೇ ವಿಫಲವಾದಂತಾಗಿದೆ. ವಿಜಯನಗರ ಜಿಲ್ಲೆಯ ಆಡಳಿತಾತ್ಮಕ ಅನುಕೂಲಕ್ಕಾಗಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ನೂತನ ಜಿಲ್ಲಾಡಳಿತ ಭವನ ನಿರ್ಮಾಣದಿಂದ ಸರ್ಕಾರದ ಎಲ್ಲ ಇಲಾಖೆಗಳು ಒಂದೇ ಕಟ್ಟಡದಲ್ಲಿ ಇರುವುದರಿಂದ ಜನರು ತಮ್ಮ ಬೇಡಿಕೆ ಈಡೇರಿಕೆಗೆ ವಿವಿಧ ಕಡೆ ಅಲೆದಾಡುವುದನ್ನು ತಪ್ಪಿಸಬಹುದು. ಜನರ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಆದರಿಂದ ನೂತನ ಜಿಲ್ಲಾಡಳಿತ ಭವನ ಕಟ್ಟಡ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಬೇಕು ಎಂದು ವೇದಿಕೆಯ ಅಧ್ಯಕ್ಷ ಯು. ಆಂಜನೇಯಲು, ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ. ಯಮುನೇಶ್, ಕಾಶೀನಾಥ ಕುಲ್ಕರ್ಣಿ, ಎ.ಎಂ. ಬಸವರಾಜ, ಎಚ್.ತಿಪ್ಪೇಸ್ವಾಮಿ, ಐಲಿಸಿದ್ದಣ್ಣ, ಬಿ. ವಿರೂಪಾಕ್ಷಪ್ಪ, ಸಿದ್ದಣ್ಣ, ಎಂ. ರಾಜಶೇಖರ್, ಡಾ.ಜಿ.ಉಮಾಮಹೇಶ್ವರ್, ಡಾ. ಲಕ್ಷ್ಮಣ ಕರಿಭೀಮಣ್ಣನವರ್, ಎಂ. ಶಂಕ್ರಪ್ಪ, ಎಚ್. ಮೆಹಬೂಬ್ ಬಾಷಾ, ಎ. ಭೀಮಪ್ಪ, ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.