ಸರ್ಕಾರಿ ಜಾಗದಲ್ಲೇ ತಾಲೂಕು ಆಡಳಿತ ಕಟ್ಟಡ ನಿರ್ಮಾಣಕ್ಕೆ ಆಗ್ರಹ

| Published : Nov 04 2025, 12:45 AM IST

ಸರ್ಕಾರಿ ಜಾಗದಲ್ಲೇ ತಾಲೂಕು ಆಡಳಿತ ಕಟ್ಟಡ ನಿರ್ಮಾಣಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ನಿಗದಿಪಡಿಸಿದ ಜಾಗದಲ್ಲೇ ತಾಲೂಕು ಆಡಳಿತ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಕುಕನೂರು ಬಂದ್ ಮಾಡಲಾಯಿತು.

ಕುಕನೂರು: ಸರ್ಕಾರ ನಿಗದಿಪಡಿಸಿದ ಧಾರ್ಮಿಕ ದತ್ತಿ ಇಲಾಖೆಯ ಗುದ್ನೇಪ್ಪನಮಠದ ಜಾಗದಲ್ಲೇ ತಾಲೂಕು ಆಡಳಿತ ಭವನ, ನ್ಯಾಯಾಲಯ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಅಭಿವೃದ್ಧಿ ಸಮಿತಿ ಹಾಗೂ ನಾನಾ ಸಂಘಟನೆಗಳಿಂದ ಕರೆ ನೀಡಿದ್ದ ಕುಕನೂರು ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಪಟ್ಟಣದ ಎಪಿಎಂಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕೋಳಿಪೇಟೆ, ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದ ವರೆಗೆ ಜರುಗಿತು. ವೀರಭದ್ರಪ್ಪ ವೃತ್ತದಲ್ಲಿ ಎಸಿ ಮಹೇಶ ಮಾಲಗಿತ್ತಿ ಅವರಿಗೆ ಪ್ರತಿಭಟನಾಕಾರರು ಸರ್ಕಾರ ನಿಗದಿಪಡಿಸಿದ ಜಾಗದಲ್ಲೇ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ತಹಸೀಲ್ದಾರ ಎಚ್. ಪ್ರಾಣೇಶ ಇದ್ದರು.

ಹಕ್ಕೊತ್ತಾಯ

ಈ ವೇಳೆ ಮಾತನಾಡಿದ ನಾರಾಯಣಪ್ಪ ಹರಪನಹಳ್ಳಿ, ಧಾರ್ಮಿಕ ದತ್ತಿ ಇಲಾಖೆ ಗುದ್ನೇಪ್ಪನಮಠದ ಭೂಮಿಯನ್ನು ಸರ್ಕಾರಿ ಕಟ್ಟಡಕ್ಕೆ ಗುರುತಿಸಿದೆ. ಇದರ ವಿರುದ್ಧ ಕೆಲವರು ಕೋರ್ಟ್‌ ಮೊರೆ ಹೋಗಿದ್ದಾರೆ. ಕೋರ್ಟಿನ ತೀರ್ಪಿಗೆ ಎಲ್ಲರೂ ಬದ್ಧರಾಗಿ, ಸಹೋದರತ್ವದ ಭಾವನೆಯಲ್ಲಿ ಹೋಗೋಣ. ಗುದ್ನೇಪ್ಪನಮಠದ ಭೂಮಿಯಲ್ಲಿ ಸರ್ಕಾರಿ ಕಟ್ಟಡ ಆಗುವುದರಿಂದ ಅಭಿವೃದ್ಧಿ ಆಗುತ್ತದೆ. ದ್ವೇಷ ಭಾವನೆ ಬಿಟ್ಟು ಕೋರ್ಟಿನ ತೀರ್ಪಿಗೆ ಬದ್ಧರಾಗಿ ತಾಲೂಕಾಭಿವೃದ್ಧಿ ಮಾಡೋಣ ಎಂದರು.

ಮುಖಂಡ ಸಂಗಮೇಶ ಗುತ್ತಿ ಮಾತನಾಡಿ, 2018ರಲ್ಲಿ ಕುಕನೂರು ತಾಲೂಕು ಆದರೂ ಒಂದು ಸರ್ಕಾರಿ ಕಟ್ಟಡ ನಿರ್ಮಾಣ ಆಗಿಲ್ಲ. ಗುದ್ನೇಶ್ವರ ದೇವಸ್ಥಾನ ಎಲ್ಲ ಸಮಾಜದವರಿಗೂ ಆರಾಧ್ಯ ದೈವ. ಎಲ್ಲರೂ ಅಲ್ಲಿ ಭಕ್ತಿ ಸೇವೆ ಮಾಡುತ್ತಾರೆ. ಸರ್ಕಾರ ನಿಗದಿ ಪಡಿಸಿದ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಿ ಏನಾದರೂ ಅವಕಾಶ ಕೊಡದಿದ್ದರೆ ಅಲ್ಲಿ ಅನಧಿಕೃತವಾಗಿ ನಿರ್ಮಾಣ ಆಗಿರುವ ಎಲ್ಲ ಮನೆ, ಕಟ್ಟಡಗಳನ್ನು ತೆರವುಗೊಳಿಸಿ, ದೇವಸ್ಥಾನ ಮಾತ್ರ ಇರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ರೈತ ಈಶಪ್ಪ ಸಬರದ, ಮುಖಂಡ ಮಹೇಶ ಗಾವರಾಳ ಮಾತನಾಡಿ, ತಾಲೂಕ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದೆ ಹಿನ್ನಡೆ ಆಗಿದೆ. ಶಾಸಕ ರಾಯರಡ್ಡಿ ಅವರು ಇದರ ಬಗ್ಗೆ ಮುತುವರ್ಜಿ ವಹಿಸಿ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡಿಸಬೇಕು ಎಂದರು.

ವಕೀಲ ಬಸವರಾಜ ಜಂಗ್ಲಿ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಮಾತನಾಡಿ, ಸರ್ಕಾರಿ ಜಾಗ ಯಾರ ಸ್ವತ್ತು ಅಲ್ಲ. ಸರ್ಕಾರ ತಾಲೂಕಾಡಳಿತ ಬಗ್ಗೆ ಗಮನ ಹರಿಸಬೇಕು ಎಂದರು.

ಕೆಎಂಎಫ್ ನಿರ್ದೇಶಕ ಹಂಪಯ್ಯಸ್ವಾಮಿ ಹಾಗೂ ಗ್ಯಾರಂಟಿ ಸಮಿತಿ ತಾಲೂಕ ಸದಸ್ಯ ಭೀಮಣ್ಣ, ಮಾತನಾಡಿ, ಭೂಗಳ್ಳರಿಗೆ ಪ್ರೋತ್ಸಾಹ ನೀಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದರು.

ವಕೀಲ ಎಂ.ಎಚ್. ಉಜ್ಜಮ್ಮನವರ ಹಾಗೂ ರಾಘವೇಂದ್ರ ಕಾತರಕಿ ಮಾತನಾಡಿ, ತಾಲೂಕಾಡಳಿತ ಕಚೇರಿಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಂದಿದೆ. ಅನುದಾನದ ಸದ್ಬಳಕೆ ಆಗಬೇಕಾದರೆ ಸರ್ಕಾರಿ ಜಾಗದಲ್ಲಿ ಸರ್ಕಾರದ ಕಟ್ಟಡ ನಿರ್ಮಾಣ ಆಗಬೇಕು ಎಂದರು.

ವರ್ತಕರ ಸಂಘದ ಅಧ್ಯಕ್ಷ ರವಿ ನಾಲ್ವಾಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, 53 ಗ್ರಾಮಗಳ ಅಭಿವೃದ್ಧಿಗೆ ತಾಲೂಕಾಡಳಿತ ಕಚೇರಿಗಳ ನಿರ್ಮಾಣ ಅವಶ್ಯವಿದೆ ಎಂದರು.

ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ರೆಹಮಾನಸಾಬ್ ಮಕ್ಕಪ್ಪನವರ್, ರಾಮಣ್ಣ ಬಂಕದಮನಿ, ಗಗನ ನೋಟಗಾರ, ಸಿರಾಜ ಕರಮುಡಿ, ರಫಿ ಹಿರೇಹಾಳ, ಶ್ರಿನಿವಾಸ ದೇಸಾಯಿ, ಖಾಸೀಂಸಾಬ್ ತಳಕಲ್ಲ, ದೇವಪ್ಪ ಸೋಬಾನದ, ಸಾವಿತ್ರಿ ಗೊಲ್ಲರ, ಫರೀದಾಬೇಗಂ ತಂಬಾಕದಾರ, ನಾಗಪ್ಪ ಹುಡೇದ, ಉದಯ ರಾಯರಡ್ಡಿ, ಶರಣಪ್ಪ ಗಾಂಜಿ. ಶಿವನಗೌಡ ದಾನರಡ್ಡಿ, ಸಂತೋಷ ಬಿನ್ನಾಳ, ಪುನೀತ, ಹೊನ್ನಪ್ಪ ಮರಡಿ, ಮುತ್ತು ವಾಲ್ಮೀಕಿ, ವೀರಯ್ಯ ತೋಂಟದಾರ್ಯಮಠ, ದಸ್ತಗೀರಿಸಾಬ ರಾಜೂರು, ಹನುಮಂತಪ್ಪ ಮುತ್ತಾಳ, ಭೀಮಣ್ಣ ನಡುಲಮನಿ, ಅರವಿಂದ ರಾಜೂರು, ಮಂಜುನಾಥ ಯಡಿಯಾಪೂರ, ದೇವೇಂದ್ರ ತೊಂಡಿಹಾಳ ಇತರರಿದ್ದರು.

ಟೈರ್ ಸುಟ್ಟು ಪ್ರತಿಭಟನೆ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗಿತು. ಬೆಳಗ್ಗೆ ಪ್ರತಿಭಟನಾಕಾರರು ದ್ಯಾಂಪೂರು ಕ್ರಾಸ್, ಅಂಬೇಡ್ಕರ್ ವೃತ್ತದಲ್ಲಿ ಟೈರ್ ಸುಟ್ಟು ಪ್ರತಿಭಟಿಸಿದರು. ಪೊಲೀಸರು ಟೈರಿಗೆ ಹತ್ತಿದ ಬೆಂಕಿ ನಂದಿಸಿದರು. ಬೆಳಗ್ಗೆಯಿಂದ ಪಟ್ಟಣದಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬಸ್ ಸಂಚಾರ ಸ್ಥಗಿತವಾಗಿತ್ತು. ಪಟ್ಟಣದ ತುಂಬೆಲ್ಲ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಸ್‌ಗಳಿಲ್ಲದೆ ಜನರು ಪ್ರಯಾಣಕ್ಕೆ ಪರದಾಡಿದರು. ಶಾಲೆಗೆ ರಜೆ ಘೋಷಿಸಿರುವುದು ತಿಳಿಯದೇ ಶಾಲೆಗೆ ಬಂದು ವಿದ್ಯಾರ್ಥಿಗಳು ಮರಳಿ ಮನೆಗೆ ತೆರಳಿದರು.