ಸಾರಾಂಶ
ಬ್ಯಾಡಗಿ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರ 7 ತಾಸು ಗುಣಮಟ್ಟದ(ಹೈವೋಲ್ಟೇಜ್) ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಗುಂಡೇನಹಳ್ಳಿ ರಾಮಗೊಂಡನಹಳ್ಳಿ ಹಾಗೂ ನೆಲೋಗಲ್ಲ ಗ್ರಾಮಗಳ ನೂರಾರು ರೈತರು ಗುರುವಾರ ಹಠಾತ್ ಪ್ರತಿಭಟನೆ ನಡೆಸಿದ್ದಲ್ಲದೇ ಸುಮಾರು 4 ತಾಸಿಗೂ ಹೆಚ್ಚು ಕಾಲ ಪಟ್ಟಣದ ಹೆಸ್ಕಾಂ ಗ್ರಿಡ್ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರುದ್ರಪ್ಪ ಕದರಮಂಡಲಗಿ ಅವರು, ಮುಂಗಾರು ಕೈಕೊಟ್ಟ ಬೆನ್ನಲ್ಲೇ ಕೃಷಿ ನಡೆಸುವುದು ದುಸ್ತರವಾಗಿದೆ. ಪ್ರಸಕ್ತ ವರ್ಷ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿ ರೈತರು ಕಂಗಾಲಾಗಿದ್ದಾರೆ. ಕೊಳವೆ ಬಾವಿ ಸೇರಿದಂತೆ ಇನ್ನಿತರ ಮೂಲಗಳಿಂದ ಕೃಷಿ ನಡೆಸುತ್ತಿರುವ ರೈತರು ಬೆಳೆಗಳನ್ನು ತೆಗೆದುಕೊಳ್ಳಲು ಹರಸಾಹಸ ಪಡಬೇಕಾಗಿದ್ದು, ಹೆಸ್ಕಾಂ ಅಧಿಕಾರಿಗಳು ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಹಾಗಿದ್ದರೆ ಕೃಷಿ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಮಂಜುನಾಥ ಕಾಡಮ್ಮನವರ ಮಾತನಾಡಿ, ಕೃಷಿಯನ್ನು ಮುಂದುವರಿಸಬೇಕಾಗಿದಲ್ಲಿ ನೀರಾವರಿ ಸೌಲಭ್ಯ ಅವಶ್ಯ. ಆದರೆ ಹೆಸ್ಕಾಂನವರು ಲೋಡ್ ಶೆಡ್ಡಿಂಗ್ ಇಲ್ಲದಿದ್ದರೂ ಅದರ ಹೆಸರಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದಲ್ಲದೇ ರಾತ್ರಿ ವೇಳೆ ಕೇವಲ 3 ತಾಸು ವಿದ್ಯುತ್ ನೀಡುತ್ತಿರುವುದರಿಂದ ರೈತರು ನಿದ್ದೆಗೆಟ್ಟು ಭೂಮಿಗಳಿಗೆ ನೀರುಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕತ್ತಲಿನಲ್ಲಿ ಯಾವ ಕಡೆಗೆ ನೀರು ಹಾಯುತ್ತದೆ ಎಂಬುದರ ಅರಿವು ಸಹ ಆಗದೇ ಇರುವುದರಿಂದ ಹಗಲು ವೇಳೆಯಲ್ಲಿಯೇ 7 ತಾಸು ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಕಾಡುಪ್ರಾಣಿ ಹಾವಳಿ: ಹೇಮನಗೌಡ ಹೊಸಗೌಡ್ರ ಮಾತನಾಡಿ, ಹೆಚ್ಚುತ್ತಿರುವ ಕಾಡುಪ್ರಾಣಿಗಳ ಹಾವಳಿಗೆ ರೈತರು ಒಂಟಿಯಾಗಿ ಹೊಲಗಳಿಗೆ ತೆರಳುವುದು ಕಷ್ಟವಾಗಿದೆ. ಇತ್ತೀಚೆಗೆ ಚಿರತೆಗಳ ಹಾವಳಿಯಿಂದ ರೈತರು ಭಯದಲ್ಲಿಯೇ ಕೃಷಿ ನಡೆಸುತ್ತಿದ್ದಾರೆ. ಹೀಗಾಗಿ ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಹಗಲು ವೇಳೆ ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಹಗಲಿನಲ್ಲಿ ಪೂರೈಕೆ: ಪ್ರತಿಭಟನೆಗೆ ಮಣಿದ ಹೆಸ್ಕಾಂ ಎಇಇ ರಾಜು, ಸೆಕ್ಷನ್ ಆಫೀಸರ್ ಮಾಲತೇಶ ಕುರುಬಗೊಂಡ ಹಗಲುವೇಳೆ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಬಳಿಕ ಸ್ಥಗಿತಗೊಂಡಿದ್ದ ಗ್ರಿಡ್ ಅರಂಭಿಸಿ ವಿದ್ಯುತ್ ಪೂರೈಕೆಗೆ ಚಾಲನೆ ನೀಡಲಾಯಿತು. ಈ ವೇಳೆ ಬಸವರಾಜಪ್ಪ ಅಂಗಡಿ, ಸುರೇಶ ಊದಗಟ್ಟಿ, ಬಸವರಾಜ ಹಾವೇರಿ, ನಾಗಪ್ಪ ಚಳಗೇರಿ, ನಾಗನಗೌಡ ಹೊಸಗೌಡ್ರ ಇತರರಿದ್ದರು.
ಹಗಲಿನಲ್ಲಿ ನಿತ್ಯ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸಿ
ಸವಣೂರು: ರೈತರ ಜಮೀನುಗಳ ನೀರಾವರಿಗೆ ರಾತ್ರಿ ವೇಳೆ ತಪ್ಪಿಸಿ ಹಗಲಿನಲ್ಲಿ ದಿನಕ್ಕೆ 7 ತಾಸು ವಿದ್ಯುತ್ ಪೂರೈಸಬೇಕು ಎಂದು ಹೆಸ್ಕಾಂ ಸಹಾಯಕ ಅಭಿಯಂತರ ವಿ.ಎಸ್. ಮರಿಗೌಡ್ರ ಅವರಿಗೆ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮತ್ತು ಸಾಮೂಹಿಕ ನಾಯಕತ್ವ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಪಟ್ಟಣದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಪವಿಭಾಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಮನವಿಯನ್ನು ಸಲ್ಲಿಸಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ನಿತ್ಯ ಸುಮಾರು 3- 4 ತಾಸು ನೀರಾವರಿ ಜಮೀನುಗಳಿಗೆ ವಿದ್ಯುತ ಪೂರೈಸುತ್ತಿದ್ದು, ಇದರಿಂದ ರೈತರಿಗೆ ಬಹಳ ತೊಂದರೆಯಗುತ್ತಿದೆ. ರೈತರು ಇನ್ನೂ ಒಂದು ತಿಂಗಳಲ್ಲಿ ಬೆಳೆಗಳು ಬರುತ್ತಿವೆ. ಈಗಾಗಲೇ ಶೇ. 25ರಷ್ಟು ಬೆಳೆ ಹಾಳಾಗಿದೆ.ಮುಂದೆ ಬರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ದಿನದಲ್ಲಿ 7 ತಾಸು ವಿದ್ಯುತ್ ನೀಡಬೇಕು. ಇಲ್ಲದೆ ಹೋದ ಸಂದರ್ಭದಲ್ಲಿ ರೈತರಿಗೆ ಮುಂದಿನ ಬೆಳೆಗಳನ್ನು ಉಳಿಸಿಕೊಳ್ಳಲು ಅನೂಕೂಲ ಕಲ್ಪಿಸದೆ ಹೋದರೆ ನೇರ ಹೊಣೆಗಾರರು ಹೆಸ್ಕಾಂ ಇಲಾಖೆಯನ್ನಾಗಿ ಮಾಡಿ ರೈತರಿಗಾದ ನಷ್ಟವನ್ನು ಇಲಾಖೆಯಿಂದಲೇ ಭರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಚನ್ನಪ್ಪ ಮರಡೂರ, ನೂರಹಮ್ಮದ ಮುಲ್ಲಾ, ಮಲೇಶ ಬಾರ್ಕಿ, ನಾಗಪ್ಪ ಹಡಪದ, ಶಿದ್ದಪ್ಪ ಕ್ಯಾಲಕೊಂಡ ಹಾಗೂ ಇತರರು ಇದ್ದರು.