ಸಾರಾಂಶ
ಚಿತ್ರದುರ್ಗ: ಅತಿವೃಷ್ಟಿಯಿಂದ ಬೆಳೆ ಹಾನಿಗೆ ತಕ್ಷಣವೇ ಪರಿಹಾರದ ಮಾರ್ಗ ಅನುಸರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಸುರಿದು ರೈತರ ಬೆಳೆಗಳು ನಾಶವಾಗಿರುವುದರಿಂದ ಕೃಷಿ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಮುಂದಿನ ಮಾರ್ಚ್ ಒಳಗೆ ವಿಮೆ ಹಣವನ್ನು ರೈತರಿಗೆ ತಲುಪಿಸಬೇಕೆಂದು ಆಗ್ರಹಿಸಿದರು. ಕಳೆದ ವರ್ಷ ಅತ್ಯಂತ ಬರಗಾಲವನ್ನು ರೈತರು ಎದುರಿಸಿದ್ದಾರೆ. ಬೋರ್‌ವೆಲ್ ವಿಫಲವಾಗಿ ಬೆಳೆಗಳು ಕೈಕೊಟ್ಟಿವೆ. ಈ ವರ್ಷ ಆರಂಭದಲ್ಲಿ ಮಳೆಯಾಯಿತಾದರೂ, ಮಧ್ಯದಲ್ಲಿ ಕೈಕೊಟ್ಟಿತು. ಮಳೆಯಿಂದಾಗಿ ಮೆಕ್ಕೆಜೋಳ ನೆಲಕ್ಕೆ ಬಿದ್ದು ಮೊಳಕೆಯೊಡೆದಿದೆ. ಒಂದು ವರ್ಷದಲ್ಲಿ ಎರಡು ವರ್ಷಕ್ಕಾಗುವಷ್ಟು ಬಂಡವಾಳವನ್ನು ರೈತರು ಬಿತ್ತನೆಗೆ ಹಾಕಿದ್ದಾರೆ. ರಾಗಿ ಬೆಳೆಗಾರರಿಗೆ ವಿಮೆ ಕಟ್ಟಿಲ್ಲವೆಂದು ಹೇಳುತ್ತಿರುವುದು ಸರಿಯಲ್ಲ. ವಿಮೆ ಪಾವತಿಸಿಲ್ಲದವರಿಗೆ ಕನಿಷ್ಠ ಭೂಮಿಗೆ ಹಾಕಿರುವ ಬಂಡವಾಳವನ್ನಾದರೂ ಪೂರೈಸಬೇಕು. ಅದಕ್ಕಾಗಿ ಎಕರೆಗೆ ಹತ್ತು ಸಾವಿರ ರು.ಗಳನ್ನು ನೀಡಬೇಕೆಂದರು. ಈರುಳ್ಳಿ, ಮೆಕ್ಕೆಜೋಳ, ರಾಗಿ, ಶೇಂಗಾ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಸಿರಿ ಧಾನ್ಯಗಳನ್ನು ಬೆಳೆಯುವ ಹೊಸದುರ್ಗದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ತಮಿಳುನಾಡಿನಿಂದ ಬೆಳೆ ಕಟಾವಿಗೆ ಇಲ್ಲಿಗೆ ಬರುತ್ತಿರುವವರು ಮನ ಬಂದಂತೆ ಹಣ ಕೇಳುತ್ತಿದ್ದಾರೆ. ಬೆಳೆ ಕಟಾವು ಮಾಡುವವರ ಜೊತೆ ಸಂಬಂಧಪಟ್ಟ ಇಲಾಖೆಯವರು ಸಭೆ ನಡೆಸಿ ದರ ನಿಗದಿಪಡಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳದೆ ರಕ್ಷಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಈ ವರ್ಷ ಅತಿವೃಷ್ಟಿಯಿಂದ ಈರುಳ್ಳಿ, ಟೊಮ್ಯಾಟೋ, ಅಡಿಕೆ ಇನ್ನು ಮುಂತಾದ ಬೆಳೆಗಳು ನಾಶವಾಗಿವೆ. ಜಿಲ್ಲಾಡಳಿತ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಆರ್.ಬಿ.ನಿಜಲಿಂಗಪ್ಪ, ರೈತ ಮುಖಂಡರುಗಳಾದ ಮಂಜುನಾಥ್, ರಂಗಸ್ವಾಮಿ, ಸದಾಶಿವಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ ಹಾಜರಿದ್ದರು.