ಬೆಳೆ ನಷ್ಟ ಪರಿಹಾರ, ಮಧ್ಯಂತರ ವಿಮೆ ನೀಡುವಂತೆ ಆಗ್ರಹ

| Published : Oct 14 2025, 01:01 AM IST

ಸಾರಾಂಶ

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವಲ್ಲಿ ತಾರತಮ್ಯ ಎಸಗಿದ್ದಾರೆ. ಈ ಕೂಡಲೇ ಬೆಳೆ ನಷ್ಟ ಪರಿಹಾರ ಹಾಗೂ ಮಧ್ಯಂತರ ಬೆಳೆ ವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹಾವೇರಿ: ಅತಿವೃಷ್ಟಿಯಿಂದ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವಲ್ಲಿ ತಾರತಮ್ಯ ಎಸಗಿದ್ದಾರೆ. ಈ ಕೂಡಲೇ ಬೆಳೆ ನಷ್ಟ ಪರಿಹಾರ ಹಾಗೂ ಮಧ್ಯಂತರ ಬೆಳೆ ವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಸೋಮವಾರ ಬೆಳಗ್ಗೆ ಜಮಾವಣೆಗೊಂಡಿದ್ದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಹಾವೇರಿ ತಾಲೂಕಿನಲ್ಲಿ ರೈತರ ಬೆಳೆ ಸಮೀಕ್ಷೆ ಮಾಡಿರುವುದರಲ್ಲಿ ತಾರತಮ್ಯ ಮಾಡಲಾಗಿದ್ದು. ಈ ವರ್ಷ ಅತಿವೃಷಿಯಿಂದ ರೈತರ ಬೆಳೆ ಹಾಳಾಗಿದೆ. ಎರಡು ಸಲ ಬೆಳೆ ಹಾಕಿದರೂ ರೈತರಿಗೆ ಇಳುವರಿ ಬಂದಿಲ್ಲ. ಕಳಪೆ ಬೀಜ ಮತ್ತು ಕಳಪೆ ಗೊಬ್ಬರ ಕೊಟ್ಟು ರೈತರಿಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳಪೆ ಬೀಜ, ಗೊಬ್ಬರ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಮಳೆಯಿಂದಾಗಿ ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾಬಿನ್ ಬೆಳೆಗಳು ನಾಶವಾಗಿವೆ. ಅಧಿಕಾರಿಗಳು ಸರಿಯಾಗಿ ಬೆಳೆ ಸಮೀಕ್ಷೆ ಮಾಡಿಲ್ಲ. ಹೆಚ್ಚಿನ ಪ್ರಮಾಣದ ಬೆಳೆಹಾನಿ ಸಂಭವಿಸಿದ್ದರೂ ಕೂಡ ಕಡಿಮೆ ಹಾನಿಯಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಬೆಳೆಹಾನಿ ವರದಿಯನ್ನು ಪುನರ್ ಪರಿಶೀಲಿಸಿ ವರದಿ ಕಳುಹಿಸಬೇಕು. ಈ ಕೂಡಲೇ ಬೆಳೆಹಾನಿ ಹಾಗೂ ವಿಮಾ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.ಇನ್ನೋರ್ವ ರೈತ ಮುಖಂಡ ರಾಜು ತರ್ಲಘಟ್ಟ ಮಾತನಾಡಿ, ರೈತರು ಸಾಲ ತೆಗೆದುಕೊಂಡ ಬ್ಯಾಂಕ್ ಮತ್ತು ಫೈನಾನ್ಸದಾರರು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಕಿರುಕುಳ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ. ಪತ್ರ ಮುಖೇನ ರೈತರಿಗೆ ತೊಂದರೆ ನೀಡದೇ ಇರುವಂತೆ ತಾಕೀತು ಮಾಡಬೇಕು. ನಮ್ಮ ಹೋಲ ನಮ್ಮ ದಾರಿ ಸಮಸ್ಯೆ ಬಗೆಹರಿಸಬೇಕು. ತಹಸೀಲ್ದಾರ ಕಚೇರಿಗೆ ಆಗಮಿಸಿರುವ ಹಿರಿಯ ರೈತರು, ಹಿರಿಯ ನಾಗರಿಕರಿಗೆ ಸ್ಪಂಧಿಸಿ ಆದ್ಯತೆ ಮೇರೆಗೆ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಒತ್ತಾಯಿಸಿದರು.ಕಬ್ಬು ಬೆಳೆಗಾರರ ಸಂಘದ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಹೆಸ್ಕಾಂ ಇಲಾಖೆಯವರು ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು. ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಡಿಸಿಸಿ ಬ್ಯಾಂಕ್ ಸ್ಥಾಪಿಸಿ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚಿನ ಸಾಲಸೌಲಭ್ಯ ಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು ರೈತರ ಸಮಸ್ಯೆಗೆ ಒಗೊಟ್ಟು ಕಾಡು ಪ್ರಾಣಿ ಸೆರೆಹಿಡಿಯಬೇಕೆಂದು ಒತ್ತಾಯಿಸಿದರು.ಈ ವೇಳೆ ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ಹೇಮಣ್ಣ ಬೂದಗಟ್ಟಿ, ನಾಗಪ್ಪ ಓಲೇಕಾರ, ಈರಣ್ಣ ಚಕ್ರಸಾಲಿ, ಅಣ್ಣಪ್ಪ ಬುಳಬುಳಿ, ಸಿದ್ದಪ್ಪ ಚಿಂದಿ, ಮಲ್ಲಾಸಾಬ ದಿಡಗೂರ, ಶಿವನಗೌಡ್ರ ದೇವಗಿರಿ, ಕಲ್ಲಪ್ಪ ಸಣ್ಮನಿ, ಮಲ್ಲಪ್ಪ ಬೆಂಚಳ್ಳಿ, ಬೀರಪ್ಪ ಮನ್ನಂಗಿ, ಲಿಂಗರಾಜು ಪ್ರಮೊಡಿ, ಕೊಟೆಪ್ಪ ಅಳಲಗೇರಿ, ಬಸವರಾಜ ಹಾದಿಮನಿ, ರೆಹಮಾನಸಾಬ ಕಟ್ಟಿಮನಿ, ರೇವಣಸಿದ್ದಯ್ಯ ಹಿರೇಮಠ, ಹಾಲಪ್ಪ ಕೊಳೂರ, ಹಾಲಪ್ಪ ಬಾಲಕ್ಕನವರ ಸೇರಿದಂತೆ ಅನೇಕರು ಹಾಜರಿದ್ದರು.