ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಸುವ ಯೋಜನೆಗೆ ಬೆಳಗಾವಿ ಮಹಾನಗರ ಪಾಲಿಕೆ ವಿರೋಧ ವ್ಯಕ್ತಪಡಿಸಿ ಗೊತ್ತುವಳಿ ಸ್ವೀಕರಿಸಬೇಕು ಎಂದು ನಮ್ಮ ನೀರು, ನಮ್ಮ ಹಕ್ಕು ಹೋರಾಟ ಸಮಿತಿ ಮುಖಂಡ ರಾಜಕುಮಾರ ಟೋಪಣ್ಣವರ ಆಗ್ರಹಿಸಿದ್ದಾರೆ.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್, ಉಪಮೇಯರ್ ವಿಶೇಷ ಸಭೆ ಕರೆದು ಈ ಸಂಬಂಧ ತೀರ್ಮಾನ ಕೈಗೊಳ್ಳಬೇಕು. ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡುತ್ತಿರುವುದು ಹಿಡಕಲ್ ಜಲಾಶಯದ ಉಳಿವಿಗಾಗಿ ಮಾತ್ರ ಅಲ್ಲ ಜೊತೆಗೆ ಬೆಳಗಾವಿ ಜಿಲ್ಲೆಗೆ ನಿರಂತರವಾಗಿ ಹುಬ್ಬಳ್ಳಿ- ಧಾರವಾಡದಿಂದ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿ ಸಲುವಾಗಿ ಬೆಳಗಾವಿ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತ ಬಂದಿದೆ. ಕೈಗಾರಿಕೆ ಉದ್ಯಮಗಳು ಬೆಳಗಾವಿಗೆ ಬರಬೇಕಾಗಿದ್ದು ಹುಬ್ಬಳ್ಳಿ-ಧಾರವಾಡ ಪಾಲಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಬಹಳಷ್ಟು ಜನ ಉದ್ಯಮಿಗಳು ಹಾಗೂ ನವೋದ್ಯಮಕ್ಕೆ, ಐಐಟಿ, ಸ್ಟಾಟ್೯ ಯೋಜನೆ, ಆರ್ಟಿಫಿಷಿಯಲ್ ಇಂಟಲಿಜೆಂಟ, ಎಕ್ಸಿಲಿಯಂಟ್ ಸೆಂಟರ್ ಹುಬ್ಬಳ್ಳಿ- ಧಾರವಾಡಕ್ಕೆ ಹೋದವು. ಕರ್ನಾಟಕದಲ್ಲಿ ಬೆಳಗಾವಿ ಜನರು ಯಾವ ತಪ್ಪು ಮಾಡಿದ್ದಾರೆ. ಪ್ರತಿಯೊಂದು ವಿಷಯಕ್ಕೆ ನಾವು ಹುಬ್ಬಳ್ಳಿ- ಧಾರವಾಡಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕೇಂದ್ರ ಬಜೆಟ್‌ನಲ್ಲಿ ನಮೋ ರೈಲ್ವೆ ಹುಬ್ಬಳ್ಳಿಯಿಂದ ಹಾವೇರಿ- ದಾವಣಗೆರೆ ಮಾತ್ರ ಸಿಮೀತ ಮಾಡಿದ್ದಾರೆ. ಬಾಗಲಕೋಟೆ, ಬೆಳಗಾವಿ ಜನ ಬಿಜೆಪಿಗೆ ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದರು.ಒಂದೇ ಭಾರತ್ ರೈಲು ಯೋಜನೆ ಆರಂಭಿಸಿದಾಗ ಹುಬ್ಬಳ್ಳಿ- ಬೆಂಗಳೂರು ಆರಂಭಿಸಿದರು. ಬೆಳಗಾವಿಗೆ ಕೇಳಿದಾಗ ತಾಂತ್ರಿಕ ಸಮಸ್ಯೆ ಹೇಳಿದರು. ಆದರೆ ಹುಬ್ಬಳ್ಳಿ- ಪುಣೆಗೆ ಒಂದೇ ಭಾರತ್ ರೈಲು ಬಿಡುತ್ತಾರೆ ಎಂದರೆ ಈಗ ತಾಂತ್ರಿಕ ಸಮಸ್ಯೆ ಆಗಲಿಲ್ಲವೇ ಎಂದರು.
ನಗರದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ ಇದರ ಬಗ್ಗೆ ಪಾಲಿಕೆಯ ಬಿಜೆಪಿ ಯಾರೊಬ್ಬ ಸದಸ್ಯರು ಧ್ವನಿ ಎತ್ತುತ್ತಿಲ್ಲ. ಇದನ್ನು ಸಹ ಸ್ಥಳೀಯ ಬಿಜೆಪಿ ನಾಯಕರ ಮಾತು ಕೇಳಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ತಿಲಾರಿ ಡ್ಯಾಮ್ ಮತ್ತು ಜಲನಾಯನ ಪ್ರದೇಶದಲ್ಲಿರುವ ಬಂಡೂರಿ ನಾಲಾ ನಮ್ಮ ನೀರು ಹಕ್ಕು ಇದೆ. ಅದರ ಬಗ್ಗೆ ಮಹಾನಗರ ಪಾಲಿಕೆ ಹೋರಾಟ ಮಾಡುತ್ತಿಲ್ಲ. ಕಳಸಾ ಬಂಡೂರಿ ನೀರಿನ ಮೇಲೂ ನಮ್ಮ ಹಕ್ಕಿದೆ. ಅದರ ಬಗ್ಗೆಯೂ ಹೋರಾಟ ಮಾಡಬೇಕಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಮಾತನಾಡಿ, ₹167 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಆರಂಭವಾಗಿದ್ದು, ಈ ಪೈಕಿ ₹101 ಕೋಟಿ ವೆಚ್ಚವಾಗಿದೆ. ಆದರೆ ಅದಕ್ಕೆ ಇನ್ನೂ ₹20 ಕೋಟಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿದರೆ ಈ ನೀರನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಬಹುದು ಎಂದರು.
ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಪೂರ್ಣಗೊಂಡರೆ ಪ್ರತಿನಿತ್ಯ 70 ಎಂಎಲ್‌ಡಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ಪಾಲಿಕೆಗೂ ಆದಾಯ ಬರುತ್ತದೆ. ಆದ್ದರಿಂದ ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಪೈಪಲೈನ್ ಕಾಮಗಾರಿ ನಡೆಸುತ್ತಿರುವುದಕ್ಕೆ ನಮ್ಮ ವಿರೋಧ ಇದೆ. ಯಾರೊಂದಿಗೂ ಚರ್ಚೆ ಮಾಡದೆ ಕೆಐಡಿಬಿಯವರು ಕಾಮಗಾರಿ ಆರಂಭ ಮಾಡಿರುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು. ರಾಜ್ಯ ಬಜೆಟ್ ನಲ್ಲಿ ಜಿಲ್ಲಾಡಳಿತ ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕೇಳಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.