ಎಂಇಎಸ್‌ ಗೂಂಡಾಗಳ ಗಡಿಪಾರಿಗೆ ಆಗ್ರಹ

| Published : Mar 23 2025, 01:34 AM IST

ಸಾರಾಂಶ

ಕನ್ನಡಿಗರ ಮೇಲೆ ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡಿದ ಎಂಇಎಸ್‌ ಗೂಂಡಾಗಳ ವಿರುದ್ಧ ಕನ್ನಡಪರ ಸಂಘಟನೆಗಳ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತು ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದಂತೆ ಶನಿವಾರ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಬಂದ್‌ ಬೆಂಬಲಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬೆಳಗಾವಿಯಲ್ಲಿ ಗೂಂಡಾವರ್ತನೆ ತೋರುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕನ್ನಡಿಗರ ಮೇಲೆ ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡಿದ ಎಂಇಎಸ್‌ ಗೂಂಡಾಗಳ ವಿರುದ್ಧ ಕನ್ನಡಪರ ಸಂಘಟನೆಗಳ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತು ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದಂತೆ ಶನಿವಾರ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಬಂದ್‌ ಬೆಂಬಲಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಮಾಡುತ್ತಿರುವ ಪ್ರತಿಭಟನೆಯನ್ನು ನಾವು ಬೆಂಬಲಿಸುತ್ತಿದ್ದೇವೆ. ಕಾರಣ ಬೆಳಗಾವಿಯಲ್ಲಿ ನೆಲೆಸಿ ಅಲ್ಲಿಯೇ ಕನ್ನಡಿಗರೊಂದಿಗೆ ಜೀವನ ಮಾಡುತ್ತಿದ್ದವರು, ಮಹಾರಾಷ್ಟ್ರದ ಮೇಲಿನ ಅತಿಯಾದ ಮೋಹದಿಂದ ಎಂಇಎಸ್ ಎಂಬ ದುಷ್ಟಕೂಟವನ್ನು ಕಟ್ಟಿಕೊಂಡು, ಇದರೊಂದಿಗೆ ಶಿವಸೇನೆ ಎಂಬ ಇಂಥದೆಯೇ ದುಷ್ಟಕೂಟವನ್ನು ಸೇರಿಕೊಂಡು ಕನ್ನಡದ ಕಾರ್ಯಕ್ರಮದಲ್ಲಿ ಕಲ್ಲು ಹೊಡೆಯುವುದು, ಇತರೆ ಹಲ್ಲೆ ನಡೆಸುವುದು ಮತ್ತು ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ಗಳ ಮೇಲೆ ಕಲ್ಲು ತೂರುತ್ತಿರುವುದು, ಅಮಾಯಕ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ಮತ್ತು ರಾಜಕೀಯವಾಗಿ ಕರ್ನಾಟಕ, ಕಾನೂನುಗಳ ವಿರುದ್ಧ ಗಲಾಟೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಆದ್ದರಿಂದ ನಮ್ಮ ನಾಯಕರು ಹೇಳಿರುವ ಕೆಲವು ವಿಚಾರಗಳನ್ನು ಬೆಂಬಲಿಸುತ್ತಾ, ಅವರ ಹೇಳಿಕೆಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.

ನಮ್ಮ ಮುಖ್ಯ ಬೇಡಿಕೆ ಎಂದರೆ, ಬೆಳಗಾವಿಯಲ್ಲಿರುವ ಎಂಇಎಸ್ ಗೂಂಡಾಗಳನ್ನು ಮತ್ತು ಶಿವಸೇನೆಯ ಗೂಂಡಾ ಕಾರ್ಯಕರ್ತರನ್ನೂ ಕೂಡ ಸಹ ಕರ್ನಾಟಕದಿಂದ ಗಡಿಪಾರು ಮಾಡಬೇಕು. ಬೆಳಗಾವಿಯಲ್ಲಿ ಗೂಂಡಾವರ್ತನೆ ತೋರುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದಿಂದ ಕಳಸಾ ಬಂಡೂರಿ ಯೋಜನೆಯನ್ನು ತಕ್ಷಣದಿಂದಲೇ ಜಾರಿಗೊಳಿಸುವಂತೆ ಮಾಡಬೇಕು. ಕರ್ನಾಟಕದಲ್ಲಿರುವ ಯಾವುದೇ ಖಾಸಗಿ ಸಂಸ್ಥೆಯಾದರೂ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು ಹಾಗೂ ಕೇಂದ್ರ ಸರ್ಕಾರದಿಂದ ಕರ್ನಾಟಕದ ಮೇಲೆ ಯಾವುದೇ ರೀತಿಯಲ್ಲೂ (ಓದು-ವ್ಯವಹಾರದಲ್ಲಿ) ಹಿಂದಿ ಕಲಿಕೆ, ಬಳಕೆ ಸಂಬಂಧ ಒತ್ತಡ ಹೇರಬಾರದು ಎಂದು ಒತ್ತಾಯಿಸುತ್ತಾ ಇಂದಿನ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಎಂಇಎಸ್ ಹೆಸರಿನಲ್ಲಿ ಕರ್ನಾಟಕದ ಕನ್ನಡಿಗರ ಮೇಲೆ ಪುಂಡಾಟ ಮಾಡುವುದರ ಜೊತೆಗೆ ಕರ್ನಾಟಕ ರಾಜ್ಯ ರಸ್ತೆಯಲ್ಲಿ ನಿದ್ರೆ ಲೆಕ್ಕಿಸದೇ ಹಗಲು ಇರಳು ಕೆಲಸ ಮಾಡುವಂತಹ ಬಸ್ ಚಾಲಕರ ಮೇಲೆ ಹಲ್ಲೆ ಇಡೀ ಮಾನವ ಕುಲಕ್ಕೆ ಹವಾಮಾನ ಮಾಡಿರುವಂತದ್ದು, ಯಾರೇ ಆಗಲಿ ಮೊದಲು ಮನುಷ್ಯತ್ವ ಮೆರೆಯಬೇಕು. ಆಮೇಲೆ ಜಾತಿ ವ್ಯವಸ್ಥೆ ಸಂಘಟನೆ ಕೆಲಸ ಮಾಡುತ್ತದೆ. ಕನ್ನಡಿಗರ ಮೇಲೆ ಎಂಇಎಸ್ ಗಳು ಮಾಡುತ್ತಿರುವ ಈ ದುಷ್ಕೃತ್ಯ ನಿಜವಾಗಲು ಖಂಡನೀಯ ಎಂದು ಖಂಡಿಸಿದರು. ಇದರ ವಿರುದ್ಧ ವಾಟಾಳ್ ನಾಗರಾಜು ಅವರು ಕನ್ನಡಿಗರ ಪರವಾಗಿ ಕನ್ನಡದ ನೆಲ ಜಲ ಭಾಷೆ ಪರವಾಗಿ ಹೋರಾಟಕ್ಕೆ ಕರೆಯನ್ನು ಕೊಡಲಾಗಿದ್ದು, ಕನ್ನಡಿಗನಾಗಿ ಆ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಾಳು ಆಗಿ ಶಾಂತಿಯುತವಾಗಿ ಈ ಪ್ರತಿಭಟನೆ ಮಾಡಿ ಕರ್ನಾಟಕ ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ಕೊಡಲಾಗುತ್ತಿದೆ. ಕೂಡಲೇ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು. ನಿಜವಾದ ಕನ್ನಡಿಗರಿಗೆ ನ್ಯಾಯವನ್ನು ದೊರಕಿಸಿಕೊಡುವಂತಹ ನಿಟ್ಟಿನಲ್ಲಿ ಈ ಕನ್ನಡ ಪರ ಸಂಘಟನೆಗಳ ಪರವಾಗಿ ಸರಕಾರ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಹಿರಿಯ ಪತ್ರಕರ್ತ ವೆಂಕಟೇಶ್, ಜಗದೀಶ್, ಸುಧೀರ್, ಕುಮಾರ್, ಪುನೀತ್, ಚೇತು ಕುಮಾರ್, ಪ್ರಭು ಇತರರು ಉಪಸ್ಥಿತರಿದ್ದರು.