ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:
ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಲಿತರ ಜಾತಿ ನಿಂದನೆ ಮಾಡಿದ್ದು, ಅವರನ್ನು ಬಿಜೆಪಿ ವರಿಷ್ಠರು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಜೊತೆಗೆ ಶಾಸಕನ ಆಸ್ತಿ ಪಾಸ್ತಿ ಸರ್ಕಾರ ಸ್ವಾಧೀನಪಡಿಸಿಕೊಂಡು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದವು.ಪಟ್ಟಣದ ವಿವಿಧ ದಲಿತಪರ ಸಂಘಟನೆಗಳು ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ತಹಸೀಲ್ದಾರ್ ಕಚೇರಿವರಿಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ತಹಸೀಲ್ದಾರ್ ಮೂಲಕ ಗೃಹ ಸಚಿವ ಜಿಪರಮೇಶ್ವರವರಿಗೆ ಮನವಿ ಸಲ್ಲಿಸಿದರು.ಈ ವೇಳೆ ದಲಿತ ಮುಖಂಡ ಡಿ.ಬಿ.ಮೂದೂರ, ಹರೀಶ ನಾಟಿಕಾರ, ತಿಪ್ಪಣ್ಣ ದೊಡಮನಿ, ಸಿ.ಜೆ.ವಿಜಯಕರ, ಪ್ರಕಾಶ ಸರೂರ ಮಾತನಾಡಿ, ಬಾದಾಮಿ ತಾಲೂಕಿನಲ್ಲಿ ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ಮಾಡಿದ್ದಾನೆ ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಗರದಲ್ಲಿ ಬಹಿಷ್ಕಾರ ಹಾಕಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಒದಗಿಸಬೇಕು. ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ದೌರ್ಜನ್ಯ ಮಾಡಿದ ಆರೋಪಿಗಳನ್ನು ಕೂಡಲೆ ಬಂಧಿಸಿ ಬಾಲಕಿಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಹಾಗೂ ಆರೋಪಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು.ತಾಳಿಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿನಾಕಾರಣ ಮಾನಸಿಕ ಕಿರುಕುಳ ನೀಡಿ ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿರುವ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆ ಕುಟುಂಬಕ್ಕೆ ಪರಿಹಾರ ಕೊಡಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ರಾಜ್ಯದಾಧ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಶಿವು ಶಿವಪೂರ, ಪ್ರಶಾಂತ ಕಾಳೆ, ಸಿದ್ದು ಕಟ್ಟಿಮನಿ, ಆರ್.ಎಂ.ಮ್ಯಾಗೇರಿ, ಪರುಶುರಾಮ ನಾಲತವಾಡ, ದೇವವರಾಜ ಹಂಗರಗಿ, ಬಸವರಾಜ ಸರೂರ, ಭಗವಂತ ಕಬಾಡೆ, ಶೇಖು ಆಲೂರ, ರೇವಣಸಿದ್ದಪ್ಪ ವಾಲಿಕಾರ, ಪರುಶುರಾಮ ಜಲಪೂರ, ಬಸಲಿಂಗಪ್ಪ ಬಿದರಕುಂದಿ, ಸಿದ್ದು ಬಿದರಕುಂದಿ, ಶಿವರಾಜ ಕಾರಕೂರ ಸೇರಿದಂತೆ ಹಲವರು ಇದ್ದರು.