ಸಾರಾಂಶ
ಒಬ್ಬ ಕನ್ನಡಿಗ ಆಸ್ಪತ್ರೆಯಲ್ಲಿ ಕಣ್ಣೀರು ಹಾಕುವುದು ನೋಡಿ ಬಹಳಷ್ಟು ಹಿಂಸೆ ಅನಿಸಿತು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.
ಕನ್ನಡ ಪ್ರಭ ವಾರ್ತೆ ಬೆಳಗಾವಿ
ಒಬ್ಬ ಕನ್ನಡಿಗ ಆಸ್ಪತ್ರೆಯಲ್ಲಿ ಕಣ್ಣೀರು ಹಾಕುವುದು ನೋಡಿ ಬಹಳಷ್ಟು ಹಿಂಸೆ ಅನಿಸಿತು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಂಡಕ್ಟರ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರಿಗೆ ಇನ್ನೂ ತುಂಬಾ ಎದೆ ನೋವಿದೆ. ನೋವು ಕಡಿಮೆ ಆಗಿಲ್ಲ ಅಂತ ಕಣ್ಣೀರು ಹಾಕಿದರು. ನೀವು ಕಣ್ಣೀರು ಹಾಕಬೇಡಿ ಎಂದು ಕಂಡಕ್ಟರ್‌ಗೆ ಹೇಳಿದ್ದೇನೆ. ಸರ್ಕಾರ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ, ಇಲ್ಲಿ ಅವರಿಗೆ ಚಿಕಿತ್ಸೆ ಸರಿ ಇಲ್ಲ ಎಂದಾದರೆ ಬೆಂಗಳೂರಿನ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಅದರ ಸಂಪೂರ್ಣ ವೆಚ್ಚ ಕರವೇ ಭರಿಸಲಿದೆ. ಚಾಲಕ ತಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ಅಂತ್ಯವಾಗಿದೆ. ಆ ಹೊಟ್ಟೆ ಉರಿಗೆ ಇಂಥ ಆಟ ಶುರು ಮಾಡಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡೋವರೆಗೂ ಕರವೇ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಇಲ್ಲಿನ ಜಿಲ್ಲಾಡಳಿತ ಈ ಕೃತ್ಯ ಎಸಗಿದವರ ವಿರುದ್ಧ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಬೇಕು. ಆರು ತಿಂಗಳು ಇಲ್ಲವೇ ಒಂದು ವರ್ಷ ಅವರನ್ನು ಜೈಲಿನಲ್ಲಿಡಬೇಕು. ಅದೇ ರೀತಿ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.ನಾನು ಬೆಳಗಾವಿಗೆ ಬಂದಷ್ಟು ಯಾವ ಸಚಿವರು ಬಂದಿಲ್ಲ:
ಇಡೀ ಕರ್ನಾಟಕದಲ್ಲಿ ಎಲ್ಲ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ತೆಗೆಯುವಂತೆ ಹೋರಾಡುತ್ತಿರುವುದೇ ಕರವೇ. ಬೆಳಗಾವಿಗೆ ನಾನು ಬಂದಷ್ಟು ಯಾವ ಕರ್ನಾಟಕದ ಮುಖ್ಯಮಂತ್ರಿ, ಸಚಿವರೂ ಬಂದಿಲ್ಲ. ಬೆಳಗಾವಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಸರ್ಕಾರದ ಮೇಲೆ ನನ್ನಷ್ಟು ಒತ್ತಡ ಬೇರೆ ಯಾರೂ ಹಾಕಿಲ್ಲ. ರಾಜ್ಯದ ಮುಖ್ಯಮಂತ್ರಿ ಒಳಗೊಂಡಂತೆ ಈ ಭಾಗದ ಮಂತ್ರಿಗಳನ್ನು ಒಳಗೊಂಡು ಯಾರೂ ಉಸಿರು ಬಿಡದೇ ಇದ್ದಾಗ ಮಾತಾಡಿದ್ದು, ಹೋರಾಟ ಮಾಡಿದ್ದು ಕರವೇ ಮಾತ್ರ ಎಂದು ಮಾಧ್ಯಮಗಳ ಪ್ರಶ್ನೆಗೆ ಟಿ.ಎ.ನಾರಾಯಣಗೌಡ ಉತ್ತರಿಸಿದರು.ಕನ್ನಡ ನೆಲದಲ್ಲಿ ಕನ್ನಡಿಗರೇ ಮಾಲೀಕರು:
ಎಂಇಎಸ್ ನವರ ವರ್ತನೆ ನಾನು ಗಮನಿಸಿದ್ದೇನೆ. ಅದಕ್ಕಾಗಿ ಬೆಳಗಾವಿ ನೆಲದಲ್ಲೇ ಅವರಿಗೆ ಉತ್ತರ ಕೊಡಬೇಕು ಅಂತಾ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಇವರ ದಬ್ಬಾಳಿಕೆ, ದೌರ್ಜನ್ಯ ಅಂತ್ಯ ಆಗಬೇಕು. ಕರ್ನಾಟಕ ಬಸ್ಗಳನ್ನು ಒಡೆದು ಹಾಕಿ, ಬಸ್ಗಳಿಗೆ ಮಸಿ ಬಳಿಯುವುದು. ಕಂಡಕ್ಟರ್ ಮೇಲೆ ಹಲ್ಲೆ ಮಾಡುವ ಪ್ರವೃತ್ತಿಯನ್ನು ಕಳೆದ 27 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಪುಣ್ಯಭೂಮಿಯಾದ ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆಯೇ ಸಾರ್ವಭೌಮ. ಈ ನೆಲದ ಮಾಲೀಕರು ಕನ್ನಡಿಗರು ಎಂದರು.ಆಡಳಿತಾತ್ಮಕ ವ್ಯವಹಾರ ಕನ್ನಡದಲ್ಲೇ ಇರಲಿ:
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಇಲ್ಲಿಯ ಆಡಳಿತ ಭಾಷೆ ಕನ್ನಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕರ್ನಾಟಕದ ಬೆಳಗಾವಿ ಗಡಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇರುವಾಗ ಎಂಇಎಸ್ನವರು ಮರಾಠಿಯಲ್ಲಿ ದಾಖಲೆ ಕೊಟ್ಟರೆ ನಾಳೆ ಕರ್ನಾಟಕಕ್ಕೆ ಭಾರಿ ತೊಂದರೆ ಆಗುತ್ತದೆ. ನಿಮ್ಮ ಎಲ್ಲ ವ್ಯವಹಾರ, ಕಾಗದಪತ್ರಗಳನ್ನು ಕರ್ನಾಟಕದ ನೆಲದಲ್ಲಿ ನೀವು ಕನ್ನಡದಲ್ಲೆ ಕೊಡಬೇಕು. ಅವರು ಮರಾಠಿಯಲ್ಲಿ ಕೇಳುತ್ತಾರೆ, ಮತ್ತೊಬ್ಬರು ಮತ್ತೊಂದು ಭಾಷೆಯಲ್ಲಿ ಕೇಳುತ್ತಾರೆ ಎಂದರೆ ಜಿಲ್ಲಾಧಿಕಾರಿ ಕೊಡಬಾರದು ಎಂದು ಟಿ.ಎ.ನಾರಾಯಣಗೌಡ ಒತ್ತಾಯಿಸಿದರು.