ಬಾಲಕಿಯರ ಅತ್ಯಾಚಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

| Published : Jul 15 2025, 01:05 AM IST

ಬಾಲಕಿಯರ ಅತ್ಯಾಚಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ದಲಿತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

- ಚಿಕ್ಕಮಗಳೂರಿನಲ್ಲಿ ದಲಿತ, ಕನ್ನಡಪರ ಸಂಘಟನೆಗಳ ಪ್ರತಿಭಟನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ದಲಿತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ , ಕೊಪ್ಪಳ ಜಿಲ್ಲೆಯ ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೈದಿರುವ ದುರುಳರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಕೂಲಂಕಶವಾಗಿ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿದರು.ಬಾಲಕಿಯರ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ಕಡಿವಾಣವಾಗುತ್ತಿಲ್ಲ. ಧರ್ಮಸ್ಥಳದ ಸೌಜನ್ಯ ಪ್ರಕರಣದ ಚಳುವಳಿ ಯಂತೆ ಬೃಹತ್ ಮಟ್ಟದಲ್ಲಿ ಹೋರಾಟ ಆರಂಭಿಸುವ ಮೂಲಕ ಸರ್ಕಾರವನ್ನು ಬಡಿದೇಳಿಸಿದರೆ ಅಮಾಯಕ ಬಾಲಕಿಯರ ಕುಟುಂಬಕ್ಕೆ ನ್ಯಾಯ ಒದಗಿಸಬಹುದು ಎಂದು ಹೇಳಿದರು.ಅತ್ಯಾಚಾರಿ ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯಾಂಗ ವ್ಯವಸ್ಥೆಯಡಿ ಶಿಕ್ಷಿಸಲು ಸರ್ವರು ಒಂದಾಗಬೇಕಿದೆ. ಅಲ್ಲದೇ ಈ ಚಳುವಳಿಗಳು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ನಿರಂತರ ಹೋರಾಟ ನಡೆಸಿ ಸರ್ಕಾರದ ಕಣ್ತೆರೆಸಬೇಕು. ಮುಂದಿನ ದಿನಗಳಲ್ಲಿ ಅತ್ಯಾಚಾರಿಗಳು ಈ ರೀತಿ ಕೃತ್ಯಕ್ಕೆ ಕೈ ಹಾಕದಂತೆ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದರು.ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ, ಕೊಪ್ಪಳದ ಬಾಲಕಿಯ ಪಾಲಕರು ಮನೆಯಲ್ಲಿ ಇಲ್ಲದ ವೇಳೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಮಾರಾಕಾಸ್ತ್ರಗಳಿಂದ ಕೊಲೆಗೈದು ದುಷ್ಕೃತ್ಯ ಮೆರೆದಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನ ಮೂಡಿಸಿರುವ ಕಾರಣ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾ ಯಿಸಿದರು.ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ರಾಜ್ಯದಲ್ಲಿ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿರುವುದು ಸರಿಯಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ನೊಂದ ಬಾಲಕಿಯರ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕಿದೆ ಎಂದರು.ಪ್ರತಿಭಟನೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಲಕ್ಷ್ಮಣ್, ರಮೇಶ್, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ವಿವಿಧ ಮುಖಂಡರಾದ ಕುರುವಂಗಿ ವೆಂಕಟೇಶ್, ಎಚ್.ಪಿ. ಮಂಜೇಗೌಡ, ಹಂಪಯ್ಯ, ಶಂಕರೇಗೌಡ, ಅನ್ವರ್, ರವಿ, ಹರೀಶ್‌ ಮಿತ್ರ, ಭಾರತಿ, ರತ್ನ, ಡಾ. ಸುಂದರಗೌಡ, ಹೇಮಂತ್ ಹಾಗೂ ಕಾರ್ಯಕರ್ತರು ಇದ್ದರು.

14 ಕೆಸಿಕೆಎಂ 4ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸ ಬೇಕೆಂದು ಒತ್ತಾಯಿಸಿ ದಲಿತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.