ಸಾರಾಂಶ
ರಟ್ಟೀಹಳ್ಳಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಅಡಿಯಲ್ಲಿ ಅಧಿಕಾರವನ್ನು ಅನುಭವಿಸುತ್ತಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅಂಬೇಡ್ಕರ್ ವಿರುದ್ದವೇ ಹಗುರವಾಗಿ ಮಾತನಾಡಿರುವುದನ್ನು ಪ್ರೊ. ಬಿ. ಕೃಷ್ಣಪ್ಪನವರ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜು ಮುಕ್ಕಣ್ಣನವರ ಆಕ್ರೋಶ ವ್ಯಕ್ತ ಪಡಿಸಿದರು.
ತಹಸೀಲ್ದಾರ್ ಕೆ. ಗುರುಬಸವರಾಜ ಅವರ ಮೂಲಕ ಅಮಿತ್ ಶಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ಸಂಸತ್ ಕಲಾಪದಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಜಪ ಮಾಡುವ ಬದಲು ದೇವರ ಜಪ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುವುದು ಎಂದು ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಅಂಬೇಡ್ಕರ್ ಅವರು ದೇಶದ ಅಗ್ರಗಣ್ಯ ವ್ಯಕ್ತಿ. ಅವರನ್ನು ಜಪ ಮಾಡಿದರೆ ಸಾಲದು ಅವರನ್ನು ಜನ ಸಾಮಾನ್ಯರು ದಿನ ನಿತ್ಯ ಪೂಜ್ಯ ಭಾವನೆಯಿಂದ ನೋಡುತ್ತಿದ್ದು, ರಾಜಕಾರಣಿಗಳು ಮಾತ್ರ ಅವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ತಮ್ಮ ಸ್ವಹಿತಾಸಕ್ತಿಗಾಗಿ ಲಘುವಾಗಿ ಬಳಸಿಕೊಳ್ಳುತ್ತಿರುವ ನಡೆ ಸರಿಯಲ್ಲ. ಅವರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಳ್ಳದ ರಾಜಕಾರಣಿಗಳು ಇನ್ಮುಂದೆ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದೇ ಆದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಾಮಾಜಿಕ ಘನತೆ ಮತ್ತು ಸಮಾನತೆ ತಂದು ಕೊಟ್ಟವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರು ದೇಶದಲ್ಲಿ ಹುಟ್ಟದೇ ಇದ್ದಲ್ಲಿ, ಸಂವಿಧಾನವನ್ನು ಬರೆಯದೆ ಇದ್ದಲ್ಲಿ ನೀವು ಚುನಾಯಿತ ಪ್ರತಿನಿಧಿಯಾಗಿ ದೇಶದ ಅತ್ಯುನ್ನತ ಸ್ಥಾನವಾದ ಕೇಂದ್ರದಲ್ಲಿ ಗೃಹ ಮಂತ್ರಿಗಳಾಗಿ ಅಧಿಕಾರ ಅನುಭವಿಸುತ್ತಿರಲಿಲ್ಲ. ಅದರ ಬದಲು ಯಾರದೋ ಮನೆಯಲ್ಲಿ ಚಾಕರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಮಾತಿಲ್ಲ. ಮುಂಬರುವ ದಿನಗಳಲ್ಲಾದರೂ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅವರಿಗೆ ಗೌರವ ನೀಡಬೇಕು ಎಂದು ಎಚ್ಚರಿಸಿದರು.
ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದೇ ಆದಲ್ಲಿ ಅಂಬೇಡ್ಕರ್ ವಿರುದ್ಧ ಹಗುರವಾಗಿ ಮಾತನಾಡಿದ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಪ್ರೊ. ಕೃಷ್ಣಪ್ಪ ಅವರ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಿವಾಜಿ ದೊಡ್ಮನಿ, ಶೇಖಪ್ಪ ನಡುಗೇರಿ, ನಿಂಗಪ್ಪ ಕಡೂರ, ಗುರುರಾಜ ಎಚ್., ಪ್ರವೀಣ ಮಾದರ ಮುಂತಾದವರು ಇದ್ದರು.