ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಬಸ್ ಸೇವೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ಸೇವೆ ಕಲ್ಪಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಎಚ್ಚರಿಕೆ ನೀಡಿದರು.ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆಯಲು ಅತೀ ಹೆಚ್ಚು ನಗರ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ, ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ಸರಿಯಾದ ಸಮಯಕ್ಕೆ ಬಸ್ ಪಾಸ್‌ನ್ನು ವಿತರಣೆ ಮಾಡದೇ ಇರುವ ಕಾರಣ ಪ್ರತಿದಿನ ನೂರಾರು ರುಪಾಯಿಗಳನ್ನು ಖರ್ಚು ಮಾಡಿಕೊಂಡು ಬಡ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವುದು ಕಷ್ಟದ ಸಂಗತಿ ಆಗಿದೆ. ಸರ್ಕಾರ ಶಾಲಾ, ಕಾಲೇಜುಗಳು ಪ್ರಾರಂಭವಾದ ತಕ್ಷಣವೇ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ನ್ನು ಸಕಾಲದಲ್ಲಿ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಸಿಬ್ಬಂದಿ ಬಳಸಿಕೊಂಡು ಬಸ್‌ಪಾಸ್ ಒದಗಿಸುವ ಅವಶ್ಯಕತೆ ಇದೆ. ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿದ ನಂತರ ವಾರಗಳ ಕಾಲ ವಿದ್ಯಾರ್ಥಿಗಳು ಬಸ್‌ಪಾಸ್‌ನ್ನು ಪಡೆಯಲು ಕಾಯುವ ಸ್ಥಿತಿ ರಾಜ್ಯದಲ್ಲಿ ಇದೆ. ಇದರಿಂದ ಬಡ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಬಸ್‌ಪಾಸ್ ಸಿಗುವರೆಗೂ ಬರದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿ ಬಹಳಷ್ಟು ವ್ಯತ್ಯಾಸವಿದ್ದು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ನ್ನು ವಿತರಿಸುವಂತೆ ಆಗ್ರಹಿಸಿದರು.ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಬಸ್ ಸೇವೆಯನ್ನು ನೀಡಿದೆ. ಇದರ ಸದುಪಯೋಗ ಮಹಿಳೆಯರು ಹೆಚ್ಚಾಗಿ ಪಡೆದುಕೊಳ್ಳುತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಕುಳಿತುಕೊಳ್ಳಲುವುದಿರಲಿ, ನಿಲ್ಲಲು ಕೂಡ ಜಾಗವಿಲ್ಲದಂತಾಗಿದೆ. ಕಳೆದ ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದಾಗ ಬಸ್‌ಗಳಲ್ಲಿ ಸಂಖ್ಯೆ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಇದರಿಂದ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿ, ಶೈಕ್ಷಣಿಕ ನಷ್ಟ ಉಂಟಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗ ನೀಡಿ, ಇಲ್ಲವೇ, ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಬಸ್ ಆದರೂ ಒದಗಿಸಲಿ. ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಸಚಿನ್ ಹಿರೇಮಠ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋಹಿತ ಅಳಕುಂಟೆ, ನಗರ ಕಾರ್ಯದರ್ಶಿ ಸಂದೀಪ ದಂಡಗಲ, ಪಾಣಿರಾಘವೇಂದ್ರ, ಕುಶಾಲ ಗೋಡಗೇರಿ, ಯಲ್ಲಪ್ಪ, ಪ್ರಜ್ವಲ, ಪ್ರಥಮ ಸೇರಿದಂತೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತನ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.