ಸಾರಾಂಶ
ಮುಂಡಗೋಡ: ಫಾರಂ ನಂ.೩ ವಿತರಿಸುವಂತೆ ಆಗ್ರಹಿಸಿ ಆನಂದನಗರ, ಇಂದಿರಾನಗರ ಗಣೇಶ ನಗರ, ಗಾಂಧಿನಗರ ಬಡಾವಣೆ ನಿವಾಸಿಗಳು ಗುರುವಾರ ಇಲ್ಲಿಯ ಪಪಂ ಕಾರ್ಯಾಲಯದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸಿದರು.ಈ ವೇಳೆ ಪ್ರತಿಭಟನೆಕಾರರು ಪಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. ಆನಂದನಗರ, ಇಂದಿರಾನಗರ ಗಣೇಶ ನಗರ, ಗಾಂಧಿನಗರಗಳಲ್ಲಿ ಸುಮಾರು ೫೦-೬೦ ವರ್ಷಗಳಿಂದ ೭೦೦-೮೦೦ ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದು, ಪಪಂ ಚುನಾವಣೆಗಳು ನಡೆದಾಗ ಈ ೪ ವಾರ್ಡ್‌ಗಳಿಂದ ೪ ಸದಸ್ಯರನ್ನು ಆಯ್ಕೆ ಮಾಡಿ ಕಳಿಸುತ್ತೇವೆ.
ಹಾಗೆಯೇ ಪಪಂನಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಡವರಿಗೆ ಸರ್ಕಾರದಿಂದ ಆಶ್ರಯ, ಅಂಬೇಡ್ಕರ್, ವಾಜಪೇಯಿ ಹೀಗೆ ಹಲವಾರು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತಿದೆ. ನಾವೂ ಪಪಂಗೆ ಮನೆ ಕರ, ನೀರನ ಕರ ಸೇರಿದಂತೆ ಎಲ್ಲ ರೀತಿಯ ಕರ ತುಂಬುತ್ತಾ ಬಂದಿದ್ದೇವೆ. ಹಾಗೆಯೆ ೨೦೧೫-೧೬ರಲ್ಲಿ ಪಪಂನಿಂದ ಸಮೀಕ್ಷೆ ಮಾಡಿ, ಮನೆಗಳಿಗೆ ಪಿಐಡಿ ನಂಬರ್ ನೀಡಿ, ಉತಾರಗಳಲ್ಲಿ ಮನೆ ಮಾಲೀಕರ ಹೆಸರು ನೋಂದಾಯಿಸಿ ಫಾರ್ಮ್ ನಂ.೩ ನೀಡಲಾಗಿದೆ ಎಂದು ನಿವಾಸಿಗಳು ವಿವರಿಸಿದರು.೨೦೧೭ರಲ್ಲಿ ಅಂದಿನ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಕರ ಆಕರಣೆ ಸಿಬ್ಬಂದಿ ಮಂಜುನಾಥ ಮುಚ್ಚಂಡಿ, ಶ್ರೀನಿವಾಸಿ ಮಿಸ್ಕಿನ್ ಕಾನೂನು ದುರ್ಬಳಕೆ ಮಾಡಿಕೊಂಡು ಈ ಬಡಾವಣೆಗೆ ಫಾರಂ ನಂ.೩ ನೀಡುವುದನ್ನು ತಡೆ ಹಿಡಿದಿದ್ದಾರೆ. ಅವರು ವರ್ಗಾವಣೆಯಾದ ನಂತರ ಕೆಲವೊಂದು ಮನೆಗಳಿಗೆ ಫಾರಂ ನಂ.೩ ನೀಡಲಾಗಿದೆ. ೨೦೨೪ರಿಂದ ಎಲ್ಲ ಮನೆಗಳಿಗೆ ಫಾರ್ಮ್ ನಂ.೩ ಕೊಡುವುದನ್ನು ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿ ಮನಸ್ಸಿಗೆ ಬಂದ ಹಾಗೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 2024 ಡಿಸೆಂಬರ್ 17ರಂದು ಪ್ರತಿಭಟನೆ ನಡೆಸಿ, ಪಪಂಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ೧ ತಿಂಗಳೊಳಗೆ ಮನೆಯ ಕರ ತುಂಬಿಸಿಕೊಂಡು ಫಾರಂ ನಂ.೩ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಬಳಿಕ ಫಾರ್ಮ್ ನಂ. ೩ ಸಲುವಾಗಿ ಹಲವು ಬಾರಿ ಅಲೆದಾಡಿದರೂ ನಮ್ಮ ಬೇಡಿಕೆ ಈಡೇರಿಸಲಾಗಿಲ್ಲ ಎಂದು ಪ್ರತಿಭಟನೆಕಾರರು ಹೇಳಿದರು.
ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಸ್ಥಳಕ್ಕಾಗಮಿಸಿ, ಸ್ವಲ್ಪ ಕಾಲಾವಕಾಶ ನೀಡಿದರೆ, ಈ ಬಗ್ಗೆ ಚರ್ಚಿಸಿ ನಮೂನೆ ೩ ಪೂರೈಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಇದಕ್ಕೆ ಜಗ್ಗದ ಪ್ರತಿಭಟನೆಕಾರರು, ಈಗಾಗಲೇ ಸಾಕಷ್ಟು ಕಾಲವಕಾಶ ನೀಡಿದರೂ ಏನು ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಸತ್ಯಾಗ್ರಹ ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಅಲಿಖಾನ ಪಠಾಣ, ಚಿದಾನಂದ ಹರಿಜನ, ವಿಠ್ಠಲ ಬಾಳಂಬೀಡ, ರಾಜು ಬೋವಿ, ಹುಲಗಪ್ಪ ಬೋವಿ, ಶಿವು ಮತ್ತಿಘಟ್ಟಿ, ಜಾಫರ್ ಚೌಡಿ, ಮುಸ್ತಾಕ, ರವಿ ಮಲ್ಲೂರ ಪಾಲ್ಗೊಂಡಿದ್ದರು.