ಕನ್ನಡಪ್ರಭ ವಾರ್ತೆ ಇಳಕಲ್ಲಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಇಳಕಲ್ಲ ತಾಲೂಕು ರೈತ ಸಂಘಟನೆ ವತಿಯಿಂದ ನಗರದ ಕಂಠಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಇಳಕಲ್ಲ ತಾಲೂಕು ರೈತ ಸಂಘಟನೆ ವತಿಯಿಂದ ನಗರದ ಕಂಠಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘಟನೆಯ ಮುಖಂಡರು, ಇಳಕಲ್ಲ ತಾಲೂಕನ್ನು ಸರ್ಕಾರ ಈಗಾಗಲೇ ಬರ ತಾಲೂಕು ಎಂದು ಘೋಷಿಸಿದೆ. ಆದರೂ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಒತ್ತಾಯಿಸಿದರು.ರೈತರು ಸಾಲ-ಸೂಲ ಮಾಡಿ ಹೊಲಗಳಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಪ್ರತಿ ಎಕರೆಗೆ ₹40 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ರೈತರು ಪಾವತಿಸಿರುವ ಬೆಳೆ ವಿಮೆಯ ಪರಿಹಾರವನ್ನು ಕೂಡ ತಕ್ಷಣ ಬಿಡುಗಡೆ ಮಾಡಬೇಕು. ಬೆಳೆ ವಿಮಾ ಕಂಪನಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ವಿಮಾ ಪರಿಹಾರವನ್ನು ಶೀಘ್ರವಾಗಿ ನೀಡಬೇಕು ಎಂದು ಒತ್ತಾಯಿಸಿದರು. ರೈತರು ಪಡೆದಿರುವ ಕೃಷಿ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ತಾಲೂಕು ಕೃಷಿ ನಿರ್ದೇಶಕ ಬಸವರಾಜ ಟಕ್ಕಳಕಿ ಹಾಗೂ ಕಂದಾಯ ಇಲಾಖೆಯ ಸರ್ಕಲ್ ಅಧಿಕಾರಿ ನವೀನ ಬಲಕುಂದಿ ಆಗಮಿಸಿ ರೈತ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿದರು. ರೈತರ ಮನವಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಅವರು ಭರವಸೆ ನೀಡಿದರು.ಈ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಳಕಲ್ಲ ನಗರ ಪೊಲೀಸ್ ಠಾಣೆ ಅಧಿಕಾರಿ ನಾಗರಾಜ ಗಡಾದ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸಿದ್ದರು.
ಪ್ರತಿಭಟನೆಯಲ್ಲಿ ರಾಜಶೇಖರಗೌಡ ಹುಡೇದಮನಿ, ಬಸವರಾಜ ಪಾಟೀಲ, ಗುರು ಗಾಣಿಗೇರ, ಶಶಿಕಾಂತ ಬಂಡ್ರಗಲ್ಲ, ಮಾಲಿಂಗಪ್ಪ ಅವಾರಿ, ರಾಮನಗೌಡ ಬೆಳ್ಳಿಹಾಳ, ಶರಣಗೌಡ ಕಂದಕೂರ, ಶರಣಗೌಡ ಗುಡಿಹಾಳ, ಶಶಿಕಾಂತಗೌಡ ಪಾಟೀಲ, ಮಲಕಾಜಗೌಡ ಪಾಟೀಲ, ಮುತ್ತಪ್ಪ ಮಾಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.