ಸಾರಾಂಶ
ಎಐಕೆಕೆಎಂಎಸ್ ಸಂಘಟನೆ ವತಿಯಿಂದ ಪ್ರತಿಭಟನೆ: ಜಿಲ್ಲಾಡಳಿತಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಯಾದಗಿರಿಕೇಂದ್ರ ತಂಡವು ಕರ್ನಾಟಕದ ವಿವಿಧೆಡೆ ಬರಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಿ ವಾರಗಳು ಕಳೆದರೂ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡದೆ ಇರುವುದು ಅತ್ಯಂತ ನೋವಿನ ಸಂಗತಿ ಎಂದು ಖಂಡಿಸಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆಯ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬಗ್ಗೆ ಹೊಂದಿರುವ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿ ಕಾರಿದರು. ಈ ವರ್ಷದ ಮುಂಗಾರು ಮಳೆ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬೆಳೆ ನಾಶವಾಗಿದೆ. ಈ ಹಿನ್ನೆಲೆ ಕಳೆದ ತಿಂಗಳು ಉತ್ತಮ ಮಳೆ ಬಂದಿದ್ದು, ರೈತರಲ್ಲಿ ಹಿಂಗಾರು ಬೆಳೆಯ ಕುರಿತು ಹೊಸ ಭರವಸೆ ಚಿಗುರಿತ್ತು. ಆದರೆ, ಇಲ್ಲಿಯವರೆಗೂ ಮಳೆ ಬಾರದೆ ಇರುವುದರಿಂದ ರೈತರು ಮತ್ತೆ ಸಂಕಷ್ಟದಲ್ಲಿದ್ದಾರೆ. ಇಲ್ಲಿಯವರೆಗೆ ತೊಗರಿ, ಶೇಂಗಾ, ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿರುವ ರೈತರು, ಈಗ ನೀರಿಲ್ಲದೆ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಬಾವಿ, ಬೋರ್‌ವೆಲ್ ಹೊಂದಿರುವವರು ಕೈಗೆ ಬಂದಿರುವ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದರು.
ಕರ್ನಾಟಕದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 161 ತೀವ್ರ, 34 ಸಾಮಾನ್ಯ ಬರ ಪೀಡಿತ ತಾಲೂಕುಗಳು ಎಂದು ಸಚಿವ ಸಂಪುಟದ ಒಪ್ಪಿಗೆಯ ನಂತರ ಕಂದಾಯ ಇಲಾಖೆ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಬರ ಪರಿಹಾರ ಕಾರ್ಯಗಳನ್ನು ತುರ್ತಾಗಿ ಆರಂಭಿಸಬೇಕಿತ್ತು. ಆದರೆ, ಬರಗಾಲ ಪೀಡಿತ ಎಂದು ಘೋಷಣೆ ಮಾಡಿರುವ ಪ್ರದೇಶಗಳಲ್ಲಿ ಬರ ಪರಿಹಾರ ಕಾಮಗಾರಿಗಳು ಕಾರ್ಯಗಳು ಇನ್ನು ಆರಂಭವಾಗದೇ ಇರುವುದು ಚಿಂತಾಜನಕವಾದ ವಿಷಯವಾಗಿದೆ ಎಂದರು.ಇಲ್ಲಿಯವರೆಗೂ ಯಾವುದೇ ರೀತಿಯ ಕಾಮಗಾರಿಗಳಾಗಲಿ, ಯೋಜನೆಗಳಾಗಲಿ ಬಹಿರಂಗವಾಗಿಲ್ಲ. ಪರಿಹಾರ ಕಾರ್ಯಗಳನ್ನು ಆರಂಭಿಸದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರನ್ನೊಬ್ಬರು ದೂಷಿಸುವುದರಲ್ಲಿಯೇ ಕಾಲಕಳೆಯುತ್ತಿರುವುದರಿಂದ ರೈತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ನವೆಂಬರ್ ತಿಂಗಳಲ್ಲಿ ಅಳಿದುಳಿದ ಬೆಳೆ ರೈತರಿಗೆ ಸಿಗದಂತಾದರೆ ಸಂಪೂರ್ಣವಾಗಿ ರೈತರು ದಿವಾಳಿ ಆಗುವುದು ಖಂಡಿತ. ಇದರಿಂದ ರೈತರು ಹೆಚ್ಚು ಕಂಗಾಲಾಗಿದ್ದಾರೆ. ಅಲ್ಲದೇ ತಮ್ಮ ಬದುಕನ್ನು ಪೂರೈಸುವ ಪ್ರಯತ್ನದಲ್ಲಿ ಅನೇಕರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಿಂದ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನವೇ ಸರ್ಕಾರ ತಡ ಮಾಡದೆ ಕೂಡಲೇ ಬರಪರಿಹಾರ ಕೆಲಸಗಳನ್ನು ಕೈಗೆತ್ತಿಕೊಂಡು ತುರ್ತು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ ಹಿರೆಬಾನರ್, ಜಿಲ್ಲಾ ಉಪಾಧ್ಯಕ್ಷ ಜಮಲ್‌ಸಾಬ್, ಸುಭಾಶ್ಚಂದ್ರ ಬಾವನೊರ್, ಶಿವರಾಜ್ ನಗನೂರ್, ಸಿದ್ದನಗೌಡ ನಗನೂರ, ಖಾಜಾ ಮೈನೂದ್ದಿನ್, ಸಿದ್ದಪ್ಪ ಇಮ್ಲಾಪುರ, ಗುರಪ್ಪಗೌಡ ನಗನೂರ, ರಾಜು ಇಮ್ಲಾಪುರ, ಚಂದ್ರರೆಡ್ಡಿ ಗೋಡಿಕಾರ್, ರಾಮರೆಡ್ಡಿ , ಮಲ್ಲಮ್ಮ ಬಳಳ್ಳಿ , ಮಲ್ಲಮ್ಮ ಸುರಪುರ, ಸರೋಜಮ್ಮ ಆದಿಮನಿ, ಚಂದ್ರರೆಡ್ಡಿ ಮಲ್ಕನಹಳ್ಳಿ, ಶರಣಪ್ಪ ಮಲಕಪ್ಪನಹಳ್ಳಿ ಸೇರಿ ಇತರರಿದ್ದರು.