ಸಾರಾಂಶ
ಶಿರಸಿ: ಅತಿಥಿ ಶಿಕ್ಷಕರಿಗೆ ಶೀಘ್ರ ವೇತನ ಬಿಡುಗಡೆ ಹಾಗೂ ಅನ್ಯಾಯವನ್ನು ನಿವಾರಿಸುವುದರ ಜತೆ ಇನ್ನಿತರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಉಪನಿರ್ದೇಶಕರ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಡಿಡಿಪಿಐ, ಬಿಇಒ ಹಾಗೂ ಮುಖ್ಯ ಶಿಕ್ಷಕರಿಂದ ನೇಮಕಾತಿ ಆದೇಶ ಪತ್ರ ನೀಡಬೇಕು. ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವಾಗ ಬಿಡುಗಡೆ ಪತ್ರ ನೀಡಬೇಕು. ಅತಿಥಿ ಶಿಕ್ಷಕರ ಸ್ಥಾನಕ್ಕೆ ಡಿಇಎಡ್, ಬಿಇಎಡ್ ಪದವೀಧರರನ್ನು ನೇಮಿಸಿಕೊಳ್ಳದೇ ಪಿಯುಸಿ ಮತ್ತು ಪದವಿ ಉತ್ತೀರ್ಣ ಮತ್ತು ಅನುತ್ತೀರ್ಣಗೊಂಡವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ನೀಡುತ್ತಿರುವ ಅತಿಥಿ ಶಿಕ್ಷಕರ ವೇತನವು ತುಂಬಾ ಕೆಳಮಟ್ಟದಲ್ಲಿದ್ದು, ಪ್ರತಿವರ್ಷ ಅತಿಥಿ ಶಿಕ್ಷಕರ ಸ್ಥಾನಕ್ಕೆ ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ತಮಗೆ ಪರಿಚಯ ಇರುವವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅತಿಥಿ ಶಿಕ್ಷಕರ ವೇತನ ಪ್ರತಿ ತಿಂಗಳ ಮೊದಲ ವಾರದಲ್ಲಿ ಬರುವಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸಲ್ಲಿಸುವ ವೇಳೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ರೀಹಾನಾ ಶೇಖ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಇಂಗಳಿಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾ ವಾರಪ್ಪನವರ್, ಸಹ ಕಾರ್ಯದರ್ಶಿ ಫಾರುಖ ಮುಲ್ಲಾ, ಅಕ್ಷಯಕುಮಾರ ವಾಲಿಕಾರ, ಶೈನಾಜ ಶೇಖ್ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಇದ್ದರು.