ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಈಚಗಟ್ಟದ ಸಿದ್ದವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ಮುಂಗಾರು ಹಂಗಾಮಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆ ಆಗದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಒತ್ತಾಯಿಸಬೇಕು. ಬೆಳೆ ವಿಮೆ ಹಾಗೂ ಇನ್ ಪುಟ್ ಸಬ್ಸಿಡಿಯಲ್ಲಿ ಆಗಿರುವ ತಾರತಮ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟು ರೈತರ ನೆರವಿಗೆ ಧಾವಿಸುವ ತೀರ್ಮಾನ ಕೈಗೊಂಡರು. ನಂತರ ಜಿಲ್ಲಾದಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.2023-2024 ರ ಬೆಳೆ ವಿಮೆ ಪರಿಹಾರ ಸರಿಯಾದ ರೀತಿಯಲ್ಲಿ ಪಾವತಿಯಾಗಿಲ್ಲ. ವಿಮಾ ಕಂಪನಿಯವರು ತಮಗೆ ತೋಚಿದಂತೆ ಪರಿಹಾರ ವಿತರಿಸಿದ್ದು, ಇದರಿಂದ ಹಲವು ರೈತರಿಗೆ ತೊಂದರೆಯಾಗಿದೆ. ಜಿಲ್ಲಾಡಳಿತ ಮರು ಸಮೀಕ್ಷೆ ನಡೆಸಿ ಬೆಳೆ ವಿಮೆ ಸರಿಯಾದ ರೀತಿಯಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಮತ್ತು ಇನ್‌ಪುಟ್ ಸಬ್ಸಿಡಿ ಎಲ್ಲ ರೈತರಿಗೆ ವಿತರಿಸಬೇಕೆಂದು ವಿನಂತಿಸಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಯಂತ್ರದಾರೆಯನ್ನು ಅವಶ್ಯಕತೆಗೆ ಅನುಗುಣವಾಗಿ ಸರಬರಾಜು ಮಾಡಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ದಾರ್ ಸಭೆ ಕರೆದು ರೈತರ ಸಮ್ಮುಖದಲ್ಲಿ ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಬೇಕು ಎಂದರು.ಗ್ರಾಮೀಣ ಪ್ರದೇಶದ ರೈತರ ಅರ್ಜಿ ವಿಲೇವಾರಿಗೆ ಚುರುಕಿನ ವೇಗ ನೀಡಿ ಮಧ್ಯವರ್ತಿಗಳ ಹಾವಳಿ ಸರಿಪಡಿಸಬೇಕು. ರೈತರು ತಮ್ಮ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಬಗ್ಗೆ ಹಲವು ಬಾರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಸಮಸ್ಯೆ ನಿವಾರಣೆಗೆ ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
2022-2023 ನೇ ಸಾಲಿನ ಬೆಳೆ ಪರಿಹಾರ ವಿತರಣೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಅವ್ಯವಹಾರವಾಗಿದೆ. ರೈತರಲ್ಲದ ಖಾತೆಗಳಿಗೆ ಹಣ ಜಮೆ ಆಗಿದೆ. ಅವ್ಯವಹಾರವನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ವಿತರಿಸಬೇಕು ಮತ್ತು ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದರು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ಬಸವರಾಜಪ್ಪ, ತಾಲೂಕು ಅಧ್ಯಕ್ಷರಾದ ಹಿರಿಯೂರಿನ ಕೆ.ಟಿ.ತಿಪ್ಪೇಸ್ವಾಮಿ, ಮೊಳಕಾಲ್ಮೂರಿನ ರವಿ ಮರ್ಲಹಳ್ಳಿ, ಹೊಸದುರ್ಗದ ಬೋರೇಶ, ಸತೀಶ್, ಹಿರಿಯ ಮುಖಂಡರಾದ ಸಿದ್ದರಾಮಣ್ಣ, ತಿಪ್ಪೇಸ್ವಾಮಿ, ಬಾಗೇನಹಾಳು ಕೊಟ್ರಬಸಪ್ಪ, ಕಲ್ಲೇಶ್, ಸದಾಶಿವ ಇದ್ದರು.