ಸಾರಾಂಶ
ಗಿರೀಶ್ ಗರಗ
ಕನ್ನಡಪ್ರಭ ವಾರ್ತೆ ಬೆಂಗಳೂರುಅರಣ್ಯ ಒತ್ತುವರಿ, ಆನೆ ಕಾರಿಡಾರ್‌ಗಳ ನಾಶ, ಕಾಡಲ್ಲಿನ ಆಹಾರ ಕೊರತೆ ಹೀಗೆ ಹಲವು ಕಾರಣಗಳಿಂದಾಗಿ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುವಂತಾಗಿದೆ. ಈ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಾಡಂಚಿನ ಗ್ರಾಮಗಳ ಸಮೀಪ ಸಾಕಾನೆ ಶಿಬಿರ ಸ್ಥಾಪನೆ ಹಾಗೂ ಸಾಕಾನೆ ಗಸ್ತಿನಂತಹ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗೆ ಅರಣ್ಯ ಇಲಾಖೆಯಿಂದ ಈವರೆಗೆ ಪುರಸ್ಕಾರ ದೊರೆತಿಲ್ಲ.ವರ್ಷದಿಂದ ವರ್ಷಕ್ಕೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಆಗಸ್ಟ್ ತಿಂಗಳಿನಿಂದೀಚೆಗೇ ಮಾನವ-ವನ್ಯಜೀವಿ ಸಂಘರ್ಷದಿಂದಾಗಿ 15ಕ್ಕೂ ಹೆಚ್ಚಿನ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ಪ್ರಕರಣಗಳು ಕಾಡಾನೆ ದಾಳಿಗಳಿಂದ ಸಂಭವಿಸಿದ್ದಾಗಿದ್ದು, ಅವುಗಳ ತಡೆಗೆ ಅರಣ್ಯದಂಚಿನಲ್ಲಿ ಕಂದಕಗಳ ನಿರ್ಮಾಣ, ಸೋಲಾರ್ ಬೇಲಿ ಸ್ಥಾಪನೆಯಂತಹ ಕ್ರಮಗಳ ಜತೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಅದರ ಜತೆಜತೆಗೆ ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಗಳ ದಾಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಿದೆಯಾದರೂ, ಈವರೆಗೆ ಅದು ಈಡೇರಿಲ್ಲ. ಹೀಗಾಗಿಯೇ ಮಾನವ-ವನ್ಯಜೀವಿ ಸಂಘರ್ಷಕ್ಕೆ ಪೂರ್ಣವಿರಾಮ ಹಾಕಲು ಅರಣ್ಯ ಇಲಾಖೆಗೆ ಸಾಧ್ಯವಾಗದಂತಾಗಿದೆ.2023ರಲ್ಲಿ ಬಿಡುಗಡೆಯಾದ ಆನೆ ಗಣತಿ ವರದಿ ಪ್ರಕಾರ ದೇಶದಲ್ಲಿ ಅಂದಾಜು 30 ಸಾವಿರ ಆನೆಗಳಿವೆ. ಅದರಲ್ಲಿ ಕರ್ನಾಟಕದಲ್ಲಿಯೇ 6,395 ಆನೆಗಳಿದ್ದು, ದೇಶದಲ್ಲೇ ಅತಿಹೆಚ್ಚು ಆನೆಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2017ರ ಗಣತಿ ವರದಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದವು. ಆರು ವರ್ಷದಲ್ಲಿ 346 ಆನೆಗಳು ಹೆಚ್ಚಾಗಿವೆ. ಹೀಗೆ ಆನೆಗಳ ಸಂಖ್ಯೆ ಹೆಚ್ಚಾದಂತೆಲ್ಲ ಆನೆಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡಿ ಪ್ರಾಣ ಹಾನಿ ಜತೆಗೆ ಬೆಳೆ ಹಾನಿ ಮಾಡುವುದೂ ಹೆಚ್ಚುತ್ತಿದೆ.ರಾಜ್ಯದಲ್ಲಿ ಮಠ, ದೇವಸ್ಥಾನಗಳು ಸೇರಿದಂತೆ ಖಾಸಗಿಯಾಗಿ 40ಕ್ಕೂ ಹೆಚ್ಚಿನ ಆನೆಗಳನ್ನು ಸಾಕಿಕೊಳ್ಳಲಾಗಿದೆ. ಅದರ ಜತೆಗೆ ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಕೊಡಗಿನ ದುಬಾರೆ, ಶಿವಮೊಗ್ಗದ ಸಕ್ರೇಬೈಲು, ಚಾಮರಾಜನಗರದ ಬಂಡೀಪುರ, ಕೆ.ಗುಡಿ ಶಿಬಿರಗಳು, ಬನ್ನೇರಘಟ್ಟ, ಮೈಸೂರು, ಶಿವಮೊಗ್ಗ ಸೇರಿದಂತೆ ಇನ್ನಿತರ ಮೃಗಾಲಯಗಳಲ್ಲಿ 160ಕ್ಕೂ ಹೆಚ್ಚಿನ ಸಾಕಾನೆಗಳಿವೆ. ಒಟ್ಟಾರೆ ರಾಜ್ಯದಲ್ಲಿ 200ಕ್ಕೂ ಹೆಚ್ಚಿನ ಸಾಕಾನೆಗಳಿವೆ.ಅರಣ್ಯ ಇಲಾಖೆಯಲ್ಲಿನ ಅಂಕಿ-ಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ 106 ಕಾಡಾನೆಗಳು ಸೆರೆ ಸಿಕ್ಕಿವೆ. ಅದರಲ್ಲಿ 2023ರಲ್ಲಿಯೇ 21 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಆ ಆನೆಗಳ ಪೈಕಿ 37 ಆನೆಗಳನ್ನು ಮತ್ತೆ ಕಾಡಿಗೆ ಬಿಡಲಾಗಿದ್ದು, 66 ಆನೆಗಳನ್ನು ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಗಿದೆ. ಶಿಬಿರಕ್ಕೆ ಸೇರಿದ 15 ಆನೆಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ. ಉಳಿದ ಆನೆಗಳನ್ನು ಪಳಗಿಸಿ, ಅವುಗಳನ್ನು ಮತ್ತೆ ಕಾಡಾನೆಗಳ ಸೆರೆಗೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಬೇರೆ ಉದ್ದೇಶಗಳಿಗೆ ಅವನ್ನು ಬಳಸಿಕೊಳ್ಳುತ್ತಿಲ್ಲ. ಆದರೆ, ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸಾಕಾನೆಗಳನ್ನು ಬಳಸಿಕೊಳ್ಳಬೇಕೆಂಬ ಆಗ್ರಹಕ್ಕೆ ಅರಣ್ಯ ಇಲಾಖೆ ಸೊಪ್ಪು ಹಾಕಿಲ್ಲ.ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ ತಡೆಗೆ ಸಾಕಾನೆ ಗಸ್ತು ನಡೆಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಅದರಂತೆ ಕಳೆದ ಡಿಸೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ಈ ರೀತಿಯ ಪ್ರಯೋಗ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಆದರೆ, ಕಾಡಾನೆ ಹಾವಳಿ ಹೆಚ್ಚಿರುವ ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನದಂತಹ ಜಿಲ್ಲೆಗಳಲ್ಲಿ ಇನ್ನೂ ಅದನ್ನು ಜಾರಿ ಮಾಡಿಲ್ಲ. ಹೀಗಾಗಿ ಕಾಡಾನೆಗಳ ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಸಾಕಾನೆ ಗಸ್ತು ಹೆಚ್ಚಿಸಬೇಕು ಎಂಬ ಆಗ್ರಹವಿದೆ. ಅದರ ಜತೆಗೆ ಕಾಡಂಚಿನ ಗ್ರಾಮಗಳ ಸಮೀಪವೇ ಸಾಕಾನೆ ಶಿಬಿರಗಳನ್ನು ಮಾಡಬೇಕು ಎಂಬ ಬೇಡಿಕೆಯೂ ಇದೆ.ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಕಾಡಾನೆ ಹಾವಳಿ ತಡೆಗೆ ಕಂದಕಗಳ ನಿರ್ಮಾಣ, ಸೌರ ಬೇಲಿಗಳ ಜತೆಗೆ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರ ಜತೆಗೆ ಕಾಡಾನೆಗಳ ಹಾವಳಿ ತಡೆಗೆ ಇರುವ ಇತರ ಪರಿಹಾರ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎನ್ನುತ್ತಾರೆ ಅರಣ್ಯ ಸಚಿವ, ಈಶ್ವರ್ ಖಂಡ್ರೆ.