ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಆಗ್ರಹ

| Published : Sep 20 2025, 01:03 AM IST

ಸಾರಾಂಶ

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸರ್ಕಾರ ನಿರ್ಲಕ್ಷ್ಯವಹಿಸಿದೆ. ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಪ್ರತ್ಯೇಕ ರಾಜ್ಯ ಕೇಳಬೇಕಾಗುತ್ತದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಪೂಜಾರಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗುವಂತೆ ನಿರ್ಮಿಸಲಾದ ಸುವರ್ಣಸೌಧ ಇನ್ನು ಶಕ್ತಿ ಕೇಂದ್ರವಾಗಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸರ್ಕಾರ ನಿರ್ಲಕ್ಷ್ಯವಹಿಸಿದೆ. ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಪ್ರತ್ಯೇಕ ರಾಜ್ಯ ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಭಾಗದ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲವಾಗಿದೆ. ಸುವರ್ಣ ಸೌಧವನ್ನು ಆಡಳಿತ ಶಕ್ತಿ ಕೇಂದ್ರವನ್ನಾಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಆ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಮಾದರಿಯಲ್ಲಿ ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ನಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆ.23ರಂದು ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ನಾವು ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ನಮ್ಮ ಹೋರಾಟದ ಫಲವಾಗಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಂದಿನ ಸಮ್ಮಿಶ್ರ ಸರ್ಕಾರ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಿತು. ಬಳಿಕ ಸುವರ್ಣ ವಿಧಾನಸೌಧವನ್ನು ನಿರ್ಮಿಸಲಾಯಿತು. ಸುವರ್ಣಸೌಧವನ್ನು ಶಕ್ತಿ ಕೇಂದ್ರವನ್ನಾಗಿಸುವಂತೆ ಆಗ್ರಹಿಸಿ ನೂರು ವಿವಿಧ ಮಠಾಧೀಶರು ಧರಣಿ ಸತ್ಯಾಗ್ರಹ ಮಾಡಿದರು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಸುವರ್ಣಸೌಧ ನಿರ್ಮಿಸಿದ ಆಶಯ ಈವರೆಗೂ ಈಡೇರಿಲ್ಲ ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿಗೆ ನಿಯೋಗವನ್ನು ತೆಗೆದುಕೊಂಡು ಹೋಗಲಾಗುವುದು. ಸರ್ಕಾರ ನಿರ್ಲಕ್ಷ ದೋರಣೆ ಮುಂದುವರೆಸಿದರೆ, ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎ.ವೈ.ಪಂಗಣ್ಣವರ, ವಿರೂಪಾಕ್ಷಯ್ಯ ನೀರಲಗಿಮಠ, ಮಹಾಂತೇಶ ಹಿರೇಮಠ, ಚಂದ್ರಪ್ಪ ಸಂಗೊಳ್ಳಿ, ಶಂಕ್ರಯ್ಯ ಹಿರೇಮಠ, ಪ್ರವೀಣ ಪಾಟೀಲ, ನಿಂಗಪ್ಪ ಅಮ್ಮಿನಬಾವಿ ಮೊದಲಾದವರು ಉಪಸ್ಥಿತರಿದ್ದರು.