ಕಾವೇರಿ ನದಿ ಪಾತ್ರದಲ್ಲಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟಿಕೊಂಡಿದ್ದು ತೆರವುಗೊಳಿಸಿ ಎಂದು ಈಗಾಗಲೇ ಸ್ಥಳ ವೀಕ್ಷಣೆ ಮಾಡಿದ ಉಪಲೋಕಾಯುಕ್ತರ ಆದೇಶ ಹೊರಡಿಸಿದ್ದರೂ ತಹಸೀಲ್ದಾರ್ ತೆರವು ಕಾರ್ಯಾಚರಣೆ ಮಾಡದೇ ಮೌನ ವಹಿಸಿದ್ದಾರೆ.

ಮಂಡ್ಯ:

ಕಾವೇರಿ ನದಿ ಪಾತ್ರದಲ್ಲಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟಿಕೊಂಡಿದ್ದು ತೆರವುಗೊಳಿಸಿ ಎಂದು ಈಗಾಗಲೇ ಸ್ಥಳ ವೀಕ್ಷಣೆ ಮಾಡಿದ ಉಪಲೋಕಾಯುಕ್ತರ ಆದೇಶ ಹೊರಡಿಸಿದ್ದರೂ ತಹಸೀಲ್ದಾರ್ ತೆರವು ಕಾರ್ಯಾಚರಣೆ ಮಾಡದೇ ಮೌನ ವಹಿಸಿದ್ದಾರೆ ಎಂದು ರೈತ ಹೋರಾಟಗಾರ ಕಿರಂಗೂರು ಪಾಪು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಉಪಲೋಕಾಯುಕ್ತರಾದ ವೀರಪ್ಪ, ನ್ಯಾಯಾಧೀಶರೂ ಈಗಾಗಲೇ ಕಾವೇರಿ ನದಿ ಪಾತ್ರವನ್ನು ವೀಕ್ಷಿಸಿದ್ದು, ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿ ಆದೇಶ ಹೊರಡಿಸಿದ್ದರೂ ಆದೇಶಕ್ಕೆ ಕಿಮ್ಮತ್ತಿಲ್ಲದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಚಂದ್ರವನ ಆಶ್ರಮ ಕಾವೇರಿ ನದಿ ಬಫರ್ ಜೋನ್ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ಕಟ್ಟಿರುವುದು ಹಾಗೂ ವೆಲ್ಲೆಸ್ಲಿ ಸೇತುವೆಯಲ್ಲಿ ಬಫರ್‌ಜೋನನ್ನು ಗುರುತಿಸಬೇಕಿದೆ. ತಹಸೀಲ್ದಾರ್ ಚೇತನಾಯಾದವ್‌ರವರ ಸರ್ವಾಧಿಕಾರಿ ಧೋರಣೆ ತೋರಿ ಆದೇಶ ಪರಿಪಾಲಿಸುತ್ತಿಲ್ಲ. ಅಲ್ಲದೆ ಜಿಲ್ಲಾಡಳಿತ, ಕಾವೇರಿ ನೀರಾವರಿ ಇಲಾಖೆ, ಪುರಸಭೆ ಮುಖ್ಯಾಧಿಕಾರಿ ಹಾಗೂ ತಾಲೂಕು ಆಡಳಿತವು ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.

ಈಗಾಗಲೇ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಒಳಗೊಂಡಂತೆ ಮೊದಲು ಬಫರ್‌ಜೋನ್ ಕಾವೇರಿ ನದಿ ಪಾತ್ರದ ಹಾಗೂ ವೆಲ್ಲೆಸ್ಲಿ ಸೇತುವೆ ಮುಂತಾದ ಕಡೆ ಗುರುತಿಸಿ ಒತ್ತುವರಿ ಮಾಡಿಕೊಂಡಿರುವ ಜಾಗ ಮತ್ತು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಅಕ್ರಮ ಕಟ್ಟಡಗಳಿಗೆ ಕಾನೂನುಬಾಹಿರಾಗಿ ಸ್ಥಳೀಯ ಪುರಸಭೆ ದಾಖಲೆಗಳನ್ನು ಮಾಡಿಕೊಟ್ಟಿದ್ದರೆ ಅದನ್ನು ಸಂಪೂರ್ಣ ರದ್ದುಪಡಿಸಬೇಕು. ಬಡವರು, ಯಾವುದೇ ಮನೆಗಳು, ನಿವೇಶನವಿಲ್ಲದ ವ್ಯಕ್ತಿಗಳಿಗೆ ಗುರುತಿಸಿ ಬೇರೆ ಕಡೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕಾವೇರಿ ನದಿಯನ್ನು ಮಾಲಿನ್ಯ ಉಂಟು ಮಾಡುತ್ತಿರುವ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳಿಂದ ಕೊಳಚೆ ನೀರು ಯಥೇಚ್ಛವಾಗಿ ನದಿಗೆ ಹೋಗಿ ಕಲುಷಿತಗೊಳ್ಳುತ್ತಿದೆ. ಇದರಿಂದ ನದಿಯಲ್ಲಿ ಸೇರಿರುವ ಕಲುಷಿತ ನೀರು ಕುಡಿಯುವ ಮಂಡ್ಯ, ಮೈಸೂರು, ಬೆಂಗಳೂರು ಇನ್ನಿತರೆ ಕಡೆ ಲಕ್ಷಾಂತರ ಜನರು ಕುಡಿದು ರೋಗ-ರುಜಿನಗಳು ಬಂದು ಮಾರಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ.

ನದಿಪಾತ್ರವನ್ನು ಅಣುಜೀವಿಗಳು, ಪ್ರಾಣಿಪಕ್ಷಿಗಳು, ದನ - ಕರುಗಳು ನೀರು ಕುಡಿಯಲೆಂದು ಬಫರ್‌ಜೋನ್ ಆಗಿ ಬಿಟ್ಟಿರುವುದು. ಅದನ್ನೇ ದುರ್ಬಳಕೆ ಮಾಡಿ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ, ಅದರಿಂದ ಮೋಜು ಮಸ್ತಿಯಂಥ ತಾಣವಾಗಿ ಪರಿವರ್ತನೆ ಮಾಡಿ ಹಾಗೂ ಆಶ್ರಮಗಳನ್ನು ಕಟ್ಟಿ ಭಕ್ತಿಭಾವದ ಹೆಸರಲ್ಲಿ ನದಿಪಾತ್ರವನ್ನೇ ಬದಲಾಯಿಸುವ ಒತ್ತುವರಿ ಮಾಡಿಕೊಳ್ಳುವ ತಾಣವಾಗಿದೆ ಎಂದು ದೂರಿದ್ದಾರೆ.

ಬಡಬಗ್ಗರಿಗೆ, ಜನಸಾಮಾನ್ಯರಿಗೆ, ಕೂಲಿಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ. ನೀರಾವರಿ ಸಮೀಪದಲ್ಲೇ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿ, ರೆಸಾರ್ಟ್‌ಗಳನ್ನು ಮಾಡಿ ಲಕ್ಷಾಂತರ ಲಾಭ ಮಾಡಿಕೊಂಡು ಕಾವೇರಿಗೆ ನದಿಗೆ ಕೊಳಚೆ ನೀರನ್ನು ಬಿಟ್ಟು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನದಿಪಾತ್ರದ ಒತ್ತುವರಿ ಕಟ್ಟಡಗಳು, ಮಾಲಿನ್ಯವನ್ನು ತೆರವುಗೊಳಿಸಲು ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನಾಯಾದವ್‌ರವರು ಮುಂದಾಗಬೇಕು. ಈಗಾಗಲೇ ಮುಖ್ಯಕಾರ್ಯದರ್ಶಿಗಳು, ಮುಖ್ಯಮಂತ್ರಿಗಳಿಗೆ, ಕಂದಾಯ ಕಾರ್ಯದರ್ಶಿಯವರಿಗೆ ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ದೂರು ನೀಡಲಾಗಿದೆ. ಕಾವೇರಿ ನದಿ ಪಾತ್ರದ ಜಾಗ ಮತ್ತು ಸರ್ಕಾರಿ ಜಾಗ ಗುರುತಿಸಿ ನಾಮಫಲಕ ಅಳವಡಿಸಬೇಕೆಂದು ಪಾಪು ಒತ್ತಾಯಿಸಿದ್ದಾರೆ.