ದಾಸ್ತಾನು ವಿವರ ಸಲ್ಲಿಕೆ ಗಡವು ವಿಸ್ತರಣೆಗೆ ಆಗ್ರಹ

| Published : Mar 26 2024, 01:20 AM IST

ಸಾರಾಂಶ

ದಾಸ್ತಾನು ವಿವರ ಸಲ್ಲಿಕೆಯ ಗಡುವು ವಿಸ್ತರಣೆ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಣ್ಣೆಕಾಳು ಖರೀದಿದಾರರು ಹಾಗೂ ಧವಸ, ಧಾನ್ಯ ಖರೀದಿದಾರರ ಸಂಘದ ವತಿಯಿಂದ ಸೋಮವಾರ ಚಿತ್ರದುರ್ಗ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಎಣ್ಣೆ ಕಾಳು ಖರೀದಿದಾರರ ಸಂಘದಿಂದ ಎಪಿಎಂಸಿ ಕಾರ್ಯದರ್ಶಿಗೆ ಮನವಿಕನ್ನಡಪ್ರಭವಾರ್ತೆ ಚಿತ್ರದುರ್ಗ

ದಾಸ್ತಾನು ವಿವರ ಸಲ್ಲಿಕೆಯ ಗಡುವು ವಿಸ್ತರಣೆ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಣ್ಣೆಕಾಳು ಖರೀದಿದಾರರು ಹಾಗೂ ಧವಸ, ಧಾನ್ಯ ಖರೀದಿದಾರರ ಸಂಘದ ವತಿಯಿಂದ ಸೋಮವಾರ ಚಿತ್ರದುರ್ಗ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದಿರುವ ರಾಜ್ಯ ಸರ್ಕಾರ ಹಳೆ ಕಾಯ್ದೆಯನ್ನೇ ಮುಂದುವರಿಸಿದೆ. ಹಾಗಾಗಿ ಕೃಷಿ ಉತ್ಪನ್ನಕ್ಕೆ ಸಂಬಂಧಿಸಿ ದಾಸ್ತಾನು ವಿವರ ಸಲ್ಲಿಸುವುದು ಕಡ್ಡಾಯವಾಗಿದೆ. ಎಪಿಎಂಸಿ ಕಾರ್ಯದರ್ಶಿಗಳು ಎಣ್ಣೆಕಾಳು ಖರೀದಿದಾದರಿಗೆ ನೋಟೀಸು ನೀಡಿ ಮಾ.26 ರ ಒಳಗೆ ದಾಸ್ತಾನು ವಿವರ ಸಲ್ಲಿಸುವಂತೆ ಸೂಚಿಸಿದ್ದರು. ಕಾರ್ಯದರ್ಶಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಖರೀದಿದಾರರು ಕಾಲಾವಕಾಶಕ್ಕೆ ವಿನಂತಿಸಿದರು. ಕನಿಷ್ಟ ಮೂರು ತಿಂಗಳ ಕಾಲಾವಕಾಶ ಕೋರಿ ಆಗ್ರಹಿಸಿದರು. ದಾಸ್ತಾನು ವಿವರಗಳ ಛಾಪಾ ಕಾಗದದ ಬದಲು ಲೆಟರ್ ಹೆಡ್‌ನಲ್ಲಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು.

ಮಾರ್ಚ ಅಂತ್ಯದಲ್ಲಿ ಖರೀದಿದಾರರಿಗೆ ಅವರದ್ದೇ ಆದ ತೆರಿಗೆ ಬಾಬತ್ತಿನ ಕೆಲಸಗಳು ಇರುತ್ತವೆ. ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆಗಳಿಗೆ ವಹಿವಾಟು, ಆದಾಯ ವಿವರಗಳನ್ನು ಒದಗಿಸಬೇಕಿದೆ. ಕ್ಲಿಷ್ಟಕರ ಸಂದರ್ಭದಲ್ಲಿ ದಾಸ್ತಾನು ವಿವರ ಕೋರಿದರೆ ಸಲ್ಲಿಸುವುದು ಕಷ್ಟ ಸಾಧ್ಯ. ಹಾಗಾಗಿ ಏಪ್ರಿಲ್ ಒಂದರಿಂದ ಹೊಸ ನಿಯಮ ಜಾರಿಗೊಳಿಸಿ ಕಾಲಾವಕಾಶ ನೀಡಬೇಕೆಂದು ಎಪಿಎಂಸಿ ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಎಣ್ಣೆಕಾಳು ಖರೀದಿದಾರರು ಹಾಗೂ ಧವಸ, ಧಾನ್ಯ ಖರೀದಿದಾರರ ಒಕ್ಕೂಟದ ಅಧ್ಯಕ್ಷ ಪಿ.ಗಿರೀಶ್, ಸಂಘದ ಅಧ್ಯಕ್ಷ ಬನಶಂಕರಿ ನಾಗರಾಜ್, ಟಿ.ಸುರೇಶ್, ಪಿ.ವೀರೇಶ್, ವಿ.ಕೆ.ದಿನೇಶ್, ರೇವಣ್ಣ, ಸತೀಶ್, ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.