Demand for farm loan waiver and continuous water supply to the canal.

- ಸುರಪುರದಲ್ಲಿ ರೈತ ಸಂಘ ಪ್ರತಿಭಟನೆ

---

ಕನ್ನಡಪ್ರಭ ವಾರ್ತೆ ಸುರಪುರ

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಮುಂದಿನ ಕೃಷಿ ಚಟುವಟಿಕೆಗಳಿಗೆ ಹೊಸ ಸಾಲ ನೀಡಬೇಕು. ಅಲ್ಲದೆ, ಕಾಲುವೆಗೆ ವಿಧಿಸಿರುವ ವಾರಬಂದಿ ಪದ್ಧತಿ ರದ್ದುಗೊಳಿಸಿ ನಿರಂತರ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಗುರುವಾರ ತಾಲೂಕಿನ ದೇವಾಪುರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಜಿಲ್ಲೆಯನ್ನು ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಮುಂಗಾರು ಮಳೆ ಬಾರದೇ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ₹2500 ಪರಿಹಾರ ನೀಡುತ್ತಿರುವುದು ತೀವ್ರ ನೋವನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಎಕರೆಗೆ ಕನಿಷ್ಠ ೨೫ ಸಾವಿರ ರು.ಗಳ ಬರ ಪರಿಹಾರವನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನೆರವಿನೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ ಮಾತನಾಡಿ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ವಸೂಲಿಯನ್ನು ಮುಖ್ಯಮಂತ್ರಿಗಳು ಒಂದು ವರ್ಷದ ಮಟ್ಟಿಗೆ ಮುಂದೂಡಿ ಆದೇಶಿಸಿದ್ದು ಇದು ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲ ಆಗುವುದಿಲ್ಲ, ಬದಲಾಗಿ ಸಾಲದ ಮೇಲಿನ ಹೊರೆ ಹೆಚ್ಚಾಗಲಿದೆ. ಆದ್ದರಿಂದ, ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ, ಹೊಸ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಶೇಂಗಾ, ಸಜ್ಜೆ, ತೊಗರಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ರೈತರು ಬೆಳೆದಿದ್ದು, ಮಳೆಯ ಕೊರತೆಯಿಂದ ಬೆಳೆಗಳು ಸಂಕಷ್ಟದಲ್ಲಿವೆ. ಇದರ ನಡುವೆ ಕಾಲುವೆಗೆ ವಾರಬಂದಿ ವಿಧಿಸಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ವಾರಾಬಂದಿ ರದ್ದುಪಡಿಸಿ ಕಾಲುವೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಮುಖ್ಯಮಂತ್ರಿ, ಶಾಸಕ ಹಾಗೂ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಚ್.ಎ.ಸರಕಾವಸ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಸಾಹೇಬಗೌಡ ಮದಲಿಂಗನಾಳ, ಎಐಟಿಯುಸಿ ಜಿಲ್ಲಾಧ್ಯಕ್ಷ ದೇವೆಂದ್ರಪ್ಪ ಪತ್ತಾರ, ವೆಂಕಟೇಶಗೌಡ ಕುಪಗಲ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮಹಾದೇವಮ್ಮ ಬೇವಿನಾಳ ಮಠ, ಸೀತಾರಾಮ ರಾಠೋಡ್, ದೇವಿಂದ್ರಪ್ಪ ಬಳಿಚಕ್ರ, ಲಕ್ಷö್ಮಣಗೌಡ, ತಿಪ್ಪಣ್ಣ ಜಂಪಾ, ತಿರುಪತಿ ಕುಪಗಲ್, ಹನುಮಗೌಡ ನಾರಾಯಣಪುರ, ಅಬ್ದುಲ್ ಮಜೀದ್ ಬಿಚ್ಚಾಲಿ, ವೆಂಕಟೇಶ ಬಳಿಚಕ್ರ, ಶಿವನಗೌಡ ರುಕ್ಮಾಪುರ, ಮೌನೇಶ ಅರಳಹಳ್ಳಿ, ಮಲ್ಲಣ್ಣ ಹಾಲಭಾವಿ ಇದ್ದರು.

ಅಸ್ತವ್ಯಸ್ತ :

ಸುಮಾರು ಒಂದು ಗಂಟೆ ಕಾಲ ರಸ್ತೆತಡೆ ನಡೆಸಿದ್ದರಿಂದ ದೇವಾಪುರ ಕ್ರಾಸ್‌ನಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

-

2ವೈಡಿಆರ್4 : ಸುರಪುರ ತಾಲೂಕಿನ ದೇವಾಪುರ್ ಕ್ರಾಸ್ ಬಳಿ ರೈತರ ಸಾಲ ಮನ್ನಾ ಹಾಗೂ ಕಾಲುವೆಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಚ್.ಎ.ಸರಕಾವಸ್ ಅವರ ಮೂಲಕ ಮನವಿ ಸಲ್ಲಿಸಿದರು.