ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯಡಿ ಸೇರ್ಪಡೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪಟ್ಟಣದ ವಿವೇಕ ಬ್ರಿಗೇಡ್ ಸಂಘಟನೆಯಿಂದ ಮಂಗಳವಾರ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯಡಿ ಸೇರ್ಪಡೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪಟ್ಟಣದ ವಿವೇಕ ಬ್ರಿಗೇಡ್ ಸಂಘಟನೆಯಿಂದ ಮಂಗಳವಾರ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿವೇಕ ಬ್ರಿಗೇಡ್ ಸಂಘಟನೆಯ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯಡಿ ಸೇರ್ಪಡಿಸಲು ಕಾನೂನಾತ್ಮಕವಾಗಿ ಸಾಧ್ಯವಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಶೇಷ ರಾಜಕೀಯ ಇಚ್ಛಾಶಕ್ತಿ ಹಾಗೂ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ. ಕೂಡಲೇ ಸರ್ಕಾರ ಆಸಕ್ತಿ ತೋರಿ ವಿಜಯಪುರ ಜಿಲ್ಲೆಯನ್ನು 370ಜೆ ಅಡಿಯಲ್ಲಿ ಸೇರಿಸಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ಕೂಡ ಭೀಕರ ಬರಗಾಲ ಉಂಟಾಗಿದೆ. ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ರಾಜ್ಯದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡುವ ಜತೆಗೆ ಪ್ರತಿ ಹೆಕ್ಟೇರಗೆ ಒಂದು ಲಕ್ಷ ಬೆಳೆ ಪರಿಹಾರ ಕೊಡಬೇಕು. ರೈತರು ಈಗ ತುಂಬಿರುವ ಬೆಳೆ ವಿಮೆ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಸಂದಾಯ ಮಾಡಬೇಕೆಂದು ಆಗ್ರಹಿಸಿದರು. ರವಿ ಚಿಕ್ಕೊಂಡ, ಮಣಿಕಂಠ ಕಲ್ಲೂರ, ಸಚಿನ ಕಲ್ಲೂರ, ಸುಭಾಸ ಕಲ್ಲೂರ,ಸಚಿನ ಪವಾರ, ಮುರುಗೇಶ ಕೊಟ್ರಶೆಟ್ಟಿ, ಕುಮಾರ ಕೊಟ್ರಶೆಟ್ಟಿ, ಮುರುಗೇಶ ಮಾಲಗಾರ, ಅರುಣ ಮಾಲಗಾರ, ಸುರೇಶ ಗಾಯಕವಾಡ, ಮಲ್ಲು ಬನಾಸಿ, ಶಿವು ಬಟ್ಟಲ ಇತರರು ಇದ್ದರು.