ಆಣೂರು, ಬುಡಪನಹಳ್ಳಿ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳ ತುಂಬಿಸಲು ಆಗ್ರಹ

| Published : Aug 13 2024, 01:05 AM IST

ಸಾರಾಂಶ

ಆಣೂರು ಮತ್ತು ಬುಡಪನಹಳ್ಳಿ ನೀರಾವರಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಕೆರೆಗಳನ್ನುಸಮರ್ಪಕವಾಗಿ ತುಂಬಿಸುವಂತೆ ಕೆಲವೆಡೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮನವಿ ಸಲ್ಲಿಸಿದರು.

ಬ್ಯಾಡಗಿ: ಆಣೂರು ಮತ್ತು ಬುಡಪನಹಳ್ಳಿ ನೀರಾವರಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಕೆರೆಗಳನ್ನುಸಮರ್ಪಕವಾಗಿ ತುಂಬಿಸುವಂತೆ ಕೆಲವೆಡೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಒಟ್ಟು 459 ಕೋಟಿ ರು. ವೆಚ್ಚದಲ್ಲಿ ಬ್ಯಾಡಗಿ ಹಾವೇರಿ ತಾಲೂಕು ಸೇರಿದಂತೆ 40ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಬಹುದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈವರೆಗೂ ಕೇವಲ ಮೂರ‍್ನಾಲ್ಕು ಕೆರೆಗಳಿಗಷ್ಟೇ ನೀರು ತುಂಬಿದ್ದು ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಂತೆ ಸದರಿ ಏತ ನೀರಾವರಿ ಯೋಜನೆಗಳು ವಿಫಲವಾಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಕ್ರಿಮಿನಲ್ ಮೊಕದ್ದಮೆ ದಾಖಲಿಸಿ:ಕಳೆದ ವರ್ಷ ಸಮರ್ಪಕವಾಗಿ ಮಳೆಯಾಗದೇ ತುಂಗಭದ್ರಾ ನದಿಯಲ್ಲಿ ನೀರಿರಲಿಲ್ಲ. ಆದರೆ ಪ್ರಸಕ್ತವರ್ಷ ಬೇಕಾದಷ್ಟು ನೀರಿದೆ. ಡ್ಯಾಂಗಳು ಕೂಡ ಭರ್ತಿಯಾಗಿವೆ. ಆದರೂ ಕೆರೆಗಳನ್ನು ತುಂಬಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ತುಂಬಿಸದೇ ಇನ್ಯಾವ ಸಂದರ್ಭದಲ್ಲಿ ಸಾಧ್ಯ, ಆದರೆ ಅಧಿಕಾರಿಗಳು ಇದಕ್ಕೆ ಕೊಡುತ್ತಿರುವ ಕಾರಣಗಳು ಹಾಸ್ಯಾಸ್ಪದವೆನಿಸುತ್ತಿದೆ. ಕೆಲ ರೈತರು ಬೆದರಿಕೆ ಹಾಕಿ ಇನ್ನೂ ಕೆಲವರು ಡುಪ್ಲಿಕೇಟ್ ಸಾಮಾನುಗಳನ್ನು ಸಂಗ್ರಹಿಸಿಕೊಂಡು ರಾತ್ರಿ ವೇಳೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದೇ ಸ್ಥಿತಿ ಮುಂದುವರೆದಲ್ಲಿ ಐದಾರು ಕೆರೆಗಳನ್ನು ಕೂಡ ತುಂಬುವುದು ಅನುಮಾನ, ಕೂಡಲೇ ಮೊಬೈಲ್ ಕಾಲ್ ರೆಕಾರ್ಡಗಳ ಆಧಾರವಾಗಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಯೋಜನೆಯಡಿ ಬರುವ ಎಲ್ಲಾ ಕರೆಗಳನ್ನು ತುಂಬಿಸುವಂತೆ ಆಗ್ರಹಿಸಿದರು.

ರೈತರ ಸಂಕಷ್ಟಕ್ಕೆ ಕೊನೆ ಇಲ್ಲ: ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನಲ್ಲಿ ಬೆಳೆಗಳಿಗೆ ಕೊಳೆರೋಗ ಬಂದು ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರೊಟ್ಟಿಗೆ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಸಹ ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುತ್ತಿಲ್ಲ. ಅಲ್ಲದೇ ಕಳೆದ ಬಾರಿ ಕಟ್ಟಿದ ಬೆಳೆ ವಿಮೆ ಮೊತ್ತವು ಇನ್ನೂ ಕೂಡ ಜಮಾ ಆಗಿಲ್ಲ. ಇವೆಲ್ಲ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮೌನೇಶ ಕಮ್ಮಾರ, ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ. ಜಾನ್ ಪುನೀತ್. ಬಸವರಾಜ ಕುಮ್ಮೂರ, ಮಲ್ಲಪ್ಪ ಕೊಪ್ಪದ, ಪರಮೇಶ ಬ್ಯಾಡಗಿ, ಶಿವರಾಜ ಬನ್ನಿಹಟ್ಟಿ, ಸುಭಾಸ್ ಬನ್ನಿಹಟ್ಟಿ, ಪ್ರವೀಣ ಹೊಸಗೌಡ್ರ, ಬಸವರಾಜ ಬಡ್ಡಿಯವರ ಸೇರಿದಂತೆ ಹಲವು ಭಾಗವಹಿಸಿದ್ದರು.