ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಆಗ್ರಹ

| Published : Feb 13 2024, 12:51 AM IST

ಸಾರಾಂಶ

ಸಂಜೆಯಾದರೆ ಸಾಕು ಸೊಳ್ಳೆಗಳ ಹಾವಳಿ ವಿಪರೀತವಾಗಿ ಬಿಟ್ಟಿದೆ. ಜನ-ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೊಳ್ಳೆಗಳ ಹಾವಳಿಯಿಂದ ಜನತೆ ತತ್ತರಿಸಿದ್ದಾರೆ. ಸ್ವಚ್ಛತಾ ಕ್ರಮ ಕೈಗೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಆಗ್ರಹಿಸಿ ನಗರದ ಟೋಕ್ರೆ ಕೋಲಿ ಸಮಾಜದ ಕಚೇರಿ ಮುಂಭಾಗದಲ್ಲಿ ಸೊಳ್ಳೆ ಬ್ಯಾಟ್, ಕ್ವಾಯಿಲ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ಜಿಲ್ಲೆಯಾದ್ಯಂತ ಸಂಜೆಯಾದರೆ ಸಾಕು ಸೊಳ್ಳೆಗಳ ಹಾವಳಿ ವಿಪರೀತವಾಗಿ ಬಿಟ್ಟಿದೆ. ಜನ-ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ದೇವರಿಗೆ ಬೆಳಿಗ್ಗೆ ಲೋಭಾನ ಹಾಕುವ ಪದ್ಧತಿ ಇದೆ. ಆದರೆ, ಜನತೆ ಸಂಜೆಯಾಗುತ್ತಿದ್ದಂತೆ ಲೊಭಾನ ಹಾಕಿ ಸೊಳ್ಳೆಗಳನ್ನು ಹೋಗಲಾಡಿಸಲು ಒದ್ದಾಡುತ್ತಿದ್ದಾರೆ ಎಂದರು.

ಜಿಲ್ಲಾದ್ಯಂತ ಚರಂಡಿಗಳ ಅಸ್ವಚ್ಛತೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಸಹ ಸೊಳ್ಳೆ ಕಾಟವಿದ್ದು, ಅವುಗಳಿಗೆ ರಕ್ಷಣೆ ನೀಡಲು ಅಡುಗೆ ಮಾಡಿದ ಬೆಂಕಿಯನ್ನು ಕಬ್ಬಿಣದ ಪುಟ್ಟಿಯಲ್ಲಿ ಹಾಕಿ ಮೇವು ಹಾಕಿ ಹೊಗೆ ಎಬ್ಬಿಸಿ ರಕ್ಷಣೆ ಕೊಡುವುದೇ ಕೆಲಸವಾಗಿದೆ ಎಂದರು.

ತಕ್ಷಣ ಕ್ರಮ ಕೈಗೊಂಡು ಚರಂಡಿ ಸ್ವಚ್ಛಗೊಳಿಸಬೇಕು. ಬ್ಲಿಚಿಂಗ್ ಪೌಡರ್ ಹಾಕಿ, ಫಾಗಿಂಗ್ ಮಾಡಿ ಸೊಳ್ಳೆ ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಬಸವರಾಜ್ ಇಟಗಿ, ಪ್ರಭು ಕೊಡ್ಲಾ, ನಿಂಗಪ್ಪ ಮಲಹಳ್ಳಿ, ಶಂಕರ ಶಿವರಾಜ್, ರಫೀಕ್ ಪಟೇಲ್, ಆಂಜನೇಯ ಬೆಳಗೇರಾ, ಹೊನ್ನಪ್ಪ, ಬಸವರಾಜ್ ಹಯ್ಯಾಳ, ಬಸಣ್ಣ, ಭೀಮರಾಯ ಇತರರಿದ್ದರು.