ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆರಾಜಾದ್ಯಂತ ಇರುವ ಟೈಲರ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆ ಮಾಡಿ, ಟೈಲರ್ ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆಶೈಕ್ಷಣಿಕ ಸಹಾಯಧನ, ಟೈಲರ್ ಕಾರ್ಮಿಕರಿಗೆ ₹25000ವರೆಗೆ ವೈದ್ಯಕೀಯ ಸಹಾಯಧನ, ಕಾರ್ಮಿಕರು ಅಕಾಲಿಕ ಸಹಜ ಮರಣ ಹೊಂದಿದರೆ ಅಂತ್ಯಕ್ರಿಯೆ ವೆಚ್ಚ ಸೇರಿ ₹25,000, 60 ವರ್ಷ ಪೂರೈಸಿದ ಕಾರ್ಮಿಕರಿಗೆ ಮಾಸಿಕ ₹2000 ಪಿಂಚಣಿ ಜಾರಿಮಾಡಬೇಕು ಎಂಬುಂದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಉಪ ವಿಭಾಗಾಧಿಕಾರಿಗಳ ಮೂಲಕ ಕಾರ್ಮಿಕ ಸಚಿವರು, ಕಾರ್ಮಿಕ ಆಯುಕ್ತರಿಗೆ ಕರ್ನಾಟಕ ಶ್ರಮಿಕ ಶಕ್ತಿ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಟೈಲರ್ ಕಾರ್ಮಿಕರು ಟೈಲರ್ ಶಾಪ್, ಗಾರ್ಮೆಂಟ್ಸ್ ಗಳಲ್ಲಿ, ಅತಿ ಹೆಚ್ಚಾಗಿ ಮನೆಗಳಲ್ಲಿ ಒಂಟಿ ಮಹಿಳೆಯರು 25-30 ವರ್ಷಗಳಿಂದ ಟೈಲರ್ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. 2021ರ ಕೊರೋನಾ ಸಂದರ್ಭದಲ್ಲಿ ಕಾರ್ಮಿಕರ ಖಾತೆಗೆ ₹2000 ಹಾಕಿದ್ದು ಬಿಟ್ಟರೆ ಬೇರೆ ಯಾವ ಸಾಮಾಜಿಕ ಭದ್ರತೆಗಳು ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2024ರಲ್ಲಿ ಜಾರಿಯಾಗಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಟೈಲರ್ ಕಾರ್ಮಿಕರ ಕಲ್ಯಾಣವಾಗುವಂತಹ ಯೋಜನೆಗಳು ಇಲ್ಲದಿರುವುದು ಕಾಣಬಹುದು ಎಂದು ಅವರು ತಿಳಿಸಿದರು. ಹೆಚ್ಚಿನ ಪ್ರಮಾಣದ ಟೈಲರ್ ಕಾರ್ಮಿಕರು ಹೆಚ್ಚಾಗಿ ಬಡತನದ ರೇಖೆಯಲ್ಲಿದ್ದಾರೆ ಮತ್ತು ಬಾಡಿಗೆ ಮನೆಯಲ್ಲಿ ವಾಸಮಾಡುವವರು ಇದ್ದಾರೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪರಿಸ್ಥಿತಿಯು ಕೆಳಮಟ್ಟದಲ್ಲಿಯೇ ಇದೆ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಆರ್ಥಿಕ ಸ್ಥಿತಿಗತಿಯು ಸುಧಾರಿಸಬೇಕಾಗಿದೆ. ಅದಕ್ಕಾಗಿ ಟೈಲರ್ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಟೈಲರ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಅಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ರವೀಂದ್ರ, ಸದಸ್ಯರಾದ ನಾಜೀಮ, ಆದಿಲ್ ಖಾನ್, ಸತೀಶ ಅರವಿಂದ, ಚಾಂದನಿ ಬಾನು, ಶೃತಿ, ಶಮೀಮ್ ಬಾನು, ಹನುಮಂತಪ್ಪ ಇತರರು ಇದ್ದರು. .