ಸಾರಾಂಶ
ರಾಮನಗರ: ಕನಿಷ್ಟ ವೇತನ ಅನುದಾನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ರಾಮನಗರ ತಾಲೂಕು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ಕನಿಷ್ಟ ವೇತನ ನೀಡದೆ ಕೇವಲ 4500 ರು., ಸಹಾಯಕಿಯರಿಗೆ 2250 ರು., ನೀಡಿ ಬಿಸಿಯೂಟದವರಿಗೆ 600 ರು., ಆಶಾ ಕಾರ್ಯಕರ್ತೆಯರಿಗೆ 2000 ರು. ಕೊಟ್ಟು ದುಡಿಸಿಕೊಳ್ಳುತ್ತಿದೆ. 2018 ರಿಂದ 1 ರು. ಕೂಡ ಸಂಬಳ ಹೆಚ್ಚು ಮಾಡದೆ ಚುನಾವಣೆಗಳು, ಮಾತೃವಂದನಾ, ಪೋಷಣ್ ಅಭಿಯಾನ ಸರ್ವೆ, ಗೃಹಲಕ್ಷ್ಮೀ, ಸೇರಿದಂತೆ ಹಲವಾರು ಕೆಲಸಗಳನ್ನು ಹೇರಿ ಹಿಂಡಿ ಹಿಪ್ಪೆಮಾಡುತ್ತಾ ಗೌರವಧನ ಎಂಬ ಪಟ್ಟಕಟ್ಟಿ ಎಲ್ಲಾ ಸವಲತ್ತುಗಳಿಂದ ವಂಚನೆ ಮಾಡುತ್ತಾ ಬಂದಿದೆ ಎಂದು ದೂರಿದರು.3ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಗಳಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಲು ಕಾನೂನು ತರಬೇಕು. ಯೋಜನೆಯಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಮಾತಿ ಮಾಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಮಾಸಿಕ 10 ಸಾವಿರ ಪಿಂಚಣಿ, 31 ಸಾವಿರ ಕನಿಷ್ಠ ವೇತನ ಜಾರಿ, ಕಾರ್ಯಕರ್ತರಿಗೆ ಸಹಾಯಕಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಆಹಾರ, ಆರೋಗ್ಯ, ಶಿಕ್ಷಣ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್ ಹೆಚ್ ಎಂ, ಐಸಿಪಿಎಸ್, ಎಸ್ ಎಸ್ ಎ, ಎಂಎನ್‌ಆರ್‌ಇಜಿ ಯೋಜನೆಗಳನ್ನು ಖಾಯಂ ಮಾಡುವ ಮೂಲಕ ಯೋಜನೆಯ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಯೋಜನೆಯ ನೌಕರರಿಗೆ ಕನಿಷ್ಠ ವೇತನ ನಿವೃತ್ತಿ ಸೌಲಭ್ಯ ಕಲ್ಪಿಸಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕು ಗಂಟೆಯಿಂದ ಆರು ಗಂಟೆ ಎಂದು ಬದಲಾಯಿಸಬೇಕು. ಬಿಸಿ ಊಟ ನೌಕರರಿಗೆ ಪರಿಹಾರ ನೀಡದೆ ನಿವೃತ್ತಿ ಮಾಡಬಾರದು. ಈಗಾಗಲೇ ನಿವೃತ್ತಿಯಾಗಿರುವವರಿಗೆ ಇಡಿಗಂಟು ನೀಡಬೇಕು. ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆ ಅಡಿಯಲ್ಲಿ ನಡೆಸಬೇಕು. ಹಲವು ವರ್ಷದಿಂದ ವೇತನ ಹೆಚ್ಚಳ ಮಾಡದಿರುವುದರಿಂದ ಕೂಡಲೇ ವೇತನ ಹೆಚ್ಚಿಸಬೇಕು, ವಿದ್ಯುತ್, ರೈಲ್ವೆ ಸೇರಿ ಸಾರ್ವಜನಿಕ ವಲಯ ಖಾಸಗೀ ಕರಣ ನಿಲ್ಲಿಸಬೇಕು.
29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕರ ಪರ ನೀತಿ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ವಾರ್ಷಿಕ ನಿವ್ವಳ ಆದಾಯದ ಶೇ.3ರಷ್ಟು ಅನುದಾನವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ 6 ನೇ ಗ್ಯಾರಂಟಿ ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ, ಬಿಸಿಯೂಟ ನೌಕರರಿಗೆ 6 ಸಾವಿರ ವೇತನ ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಮುಖಂಡ ಎನ್. ವೆಂಕಟಾಚಲ್ಲಯ್ಯ, ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ, ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಬಿ. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಯೋಗೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಚಾಲಕಿ ಸಿ. ಜಯಲಕ್ಷ್ಮಮ್ಮ, ತಾಲೂಕು ಅಧ್ಯಕ್ಷೆ ಪುಷ್ಪಲತಾ, ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ, ಪದಾಧಿಕಾರಿಗಳಾದ ಸಾವಿತ್ರಮ್ಮ, ಲೀಲಾ, ನಾಗಮ್ಮ, ನಾಗರತ್ನ, ಭಾಗ್ಯಮ್ಮ, ಹೊನ್ನಮ್ಮ, ಹೇಮ, ಮುಮುತಾಜ್, ಶಿವಮ್ಮ ಇತರರು ಭಾಗವಹಿಸಿದ್ದರು.23ಕೆಆರ್ ಎಂಎನ್ 3.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.