ಸಾರಾಂಶ
ಹೊಸಪೇಟೆ: ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ, ವಿಜಯನಗರ ಘಟಕದಿಂದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ಇನ್ನಿತರ ಸಚಿವರಿಗೆ ಮನವಿ ಪತ್ರ ರವಾನಿಸಲಾಯಿತು.ಹೊರಗುತ್ತಿಗೆ ರದ್ದುಗೊಳಿಸಿ, ಕಾಯಂ ನೇಮಕಾತಿಗಾಗಿ ಈಗಾಗಲೇ ನಿರ್ಧರಿಸಿದಂತೆ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ರಚನೆಗಾಗಿ, ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆ ಜಾರಿಗಾಗಿ ವಿಜಯನಗರ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, "ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ, ಅನ್ಯಾಯವೆಸಗುವ ಗುತ್ತಿಗೆದಾರರಿಂದ ಮುಕ್ತಿಗೊಳಿಸಬೇಕು ಎಂಬ ಕಾರ್ಮಿಕರ ನಿರಂತರ ಹೋರಾಟ ಮತ್ತು ಬೇಡಿಗೆ ಸ್ಪಂದಿಸಿ, ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ವಿವಿಧೋದ್ದೇಶ ಸಹಕಾರ ಸಂಘ ರಚಿಸುವ ನಿರ್ಧಾರ ಮಾಡಿದೆ. ಆದರೆ ಸಹಕಾರ ಸಂಘ ರಚಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಕೆಲ ಜಿಲ್ಲೆಗಳಲ್ಲಿ ಜನವರಿ 2025ರಿಂದಲೇ ಸಹಕಾರ ಸಂಘ ರಚಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಒಂದು ಸಾವಿರ ರು. ಪಾವತಿಸಿ, ಸದಸ್ಯರು ಕೂಡ ಆಗಿದ್ದಾರೆ. ಆದರೆ ಸಹಕಾರ ಸಂಘ ಇಲ್ಲಿಯವರೆಗೂ ಸಂಪೂರ್ಣವಾಗಿ ರಚನೆಯಾಗಿ, ತನ್ನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿಲ್ಲ ಎಂದರು.ಜಿಲ್ಲಾ ಮುಖಂಡರಾದ ಅಜ್ಜಯ್ಯ ಮಾತನಾಡಿ, ಇದಲ್ಲದೇ ಹೈಕೋರ್ಟ್ ಆದೇಶದಂತೆ, ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕನಿಷ್ಠ 21 ಸಾವಿರ ರು. ಹೆಚ್ಚಿಸುವ ಅಧಿಸೂಚನೆ ರಾಜ್ಯ ಸರ್ಕಾರ ಹೊರಡಿಸಿತ್ತು. ಲಕ್ಷಾಂತರ ಸಂಖ್ಯೆ ಕಾರ್ಮಿಕರು ಅತ್ಯಂತ ಸಂತೋಷಗೊಂಡಿದ್ದರು. ಈಗಾಗಲೇ ಕಾರ್ಮಿಕ ಸಂಘಗಳು, ಮಾಲೀಕರು ಹಾಗೂ ಸರ್ಕಾರವನ್ನೊಳಗೊಂಡ ತ್ರಿಪಕ್ಷೀಯ ಸಭೆ ಮೂರು ಬಾರಿ ಆಗಿವೆ. ಆದರೆ ಕಾರ್ಮಿಕರ ಹಿತ ದೃಷ್ಟಿಯಿಂದ ಈ ಸಭೆಗಳು ಫಲಪ್ರದವಾಗಿಲ್ಲ. ಈ ವಿಷಯದಲ್ಲೂ ರಾಜ್ಯ ಸರ್ಕಾರ ಕಾರ್ಮಿಕರ ಪರ ಸ್ಪಷ್ಟ ಹಾಗೂ ದೃಢ ನಿಲುವು ತೆಗೆದುಕೊಳ್ಳಬೇಕು ಮತ್ತು ಅಧಿಸೂಚನೆಯು ಸರ್ಕಾರಿ ಆದೇಶವಾಗಬೇಕಿದೆ. ಆಗ ಮಾತ್ರವೇ ಕಾರ್ಮಿಕರ ಶ್ರಮವನ್ನು ದೋಚಿ ಕೋಟ್ಯಂತರ ರು. ಲಾಭಗಳಿಸುವ ಮಾಲೀಕರ ಶೋಷಣೆಯಿಂದ ಕಾರ್ಮಿಕರಿಗೆ ಮುಕ್ತಿ ದೊರಕಲಿದೆ ಎಂದರು.
ಮುಖಂಡ ಹಾಲೇಶ್ ಮಾತನಾಡಿ, ಪ್ರತಿ ತಿಂಗಳು ಪ್ರತಿಯೋರ್ವ ಗುತ್ತಿಗೆ ಕಾರ್ಮಿಕ ಉತ್ತಮ ಆರೋಗ್ಯ ಸೌಲಭ್ಯಗಳು ದೊರೆಯಬೇಕು ಎಂಬ ಹಂಬಲದಿಂದ ಇ.ಎಸ್.ಐ ಶುಲ್ಕವನ್ನು ಭರಿಸುತ್ತಾನೆ. ಆದರೆ ವಿಪರ್ಯಾಸವೆಂದರೆ ಇ.ಎಸ್.ಐ ಸೌಲಭ್ಯವು ಅವಶ್ಯಕವಿರುವ ಕಾರ್ಮಿಕನಿಗೆ ಹಾಗೂ ಆತನ ಕುಟುಂಬಕ್ಕೆ ತಲುಪುತ್ತಿಲ್ಲ. ಬೆರಳೆಣಿಕೆಯ ಜಿಲ್ಲೆಗಳು ಹೊರತುಪಡಿಸಿದರೆ, ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಒಳಗೊಂಡ ಸುಸಜ್ಜಿತ ಆಸ್ಪತ್ರೆಗಳೇ ಇಲ್ಲ. ವಿಜಯನಗರ ಜಿಲ್ಲೆಯಲ್ಲಿ ಡಿಸ್ಪೆನ್ಸರಿ ಮಾತ್ರ ಇದ್ದು ಹೆಚ್ಚಿನ ಮಟ್ಟದ ಚಿಕಿತ್ಸೆಗೆ ಬೆಂಗಳೂರು, ಹುಬ್ಬಳಿ, ಕಲಬುರ್ಗಿ ಅಂತಹ ನಗರಗಳಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ಹೋಗಬೇಕು. ಆದ್ದರಿಂದ ಗುತ್ತಿಗೆ ಕಾರ್ಮಿಕರ ಈ ಎಲ್ಲಾ ಸಮಸ್ಯೆಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಪದ್ಮಾ, ರಮೇಶ್ ಮತ್ತಿತರರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))