ಅತಿಕ್ರಮಣ ಸಕ್ರಮ, ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಇತ್ಯಾದಿ ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ರೈತರು ಸೋಮವಾರ ಕಿರವತ್ತಿ ಪೊಲೀಸ್ ಠಾಣೆ ಎದುರಿನಿಂದ ರಾಷ್ಟ್ರೀಯ ಹೆದ್ದಾರಿ ೬೩ ಮೂಲಕ ಗ್ರಾಪಂವರಗೆ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಅನ್ನದಾತ ರೈತ ಸಂಘ, ಹಸಿರುಸೇನೆಯಿಂದ ಪ್ರತಿಭಟನಾ ಮೆರವಣಿಗೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಅತಿಕ್ರಮಣ ಸಕ್ರಮ, ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಇತ್ಯಾದಿ ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ರೈತರು ಸೋಮವಾರ ಕಿರವತ್ತಿ ಪೊಲೀಸ್ ಠಾಣೆ ಎದುರಿನಿಂದ ರಾಷ್ಟ್ರೀಯ ಹೆದ್ದಾರಿ ೬೩ ಮೂಲಕ ಗ್ರಾಪಂವರಗೆ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ಅನ್ನದಾತ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಮಾತನಾಡಿ, ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಕೊಡಬೇಕು. ಬಡವರ ಶಾಪದಿಂದ ಸರ್ಕಾರ ಉದ್ದಾರವಾಗಲ್ಲ. ಸರ್ಕಾರ ಬಡವರ ಕಷ್ಟಕ್ಕೆ ಧ್ವನಿಯಾಗಬೇಕು. ಇಲ್ಲದಿದ್ದರೆ ದಿಲ್ಲಿಯವರೆಗೆ ಹೋಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಸಲ್ಲಿಸಿದ ಮನವಿಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ಎಲ್ಲಾ ರೀತಿಯ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ೧೯೭೮ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ದಲಿತರಿಗೆ, ಎಲ್ಲ ವರ್ಗದವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಅರಣ್ಯ ಅತಿಕ್ರಮಣದಾರರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಬೇಕು. ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದ ಹಾಳಾಗಿರುವ ಎಲ್ಲಾ ರಸ್ತೆಗಳ ಸುಧಾರಣೆ ಕೂಡಲೇ ಆಗಬೇಕು. ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗದಿಂದ ಬೆಳೆಹಾನಿಯಾಗಿದ್ದು, ತಕ್ಷಣ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕು ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಮೈಕ್ರೋ ಪೈನಾನ್ಸ್ ಹಾವಳಿ ಹೆಚ್ಚಿದ್ದು, ರೈತರು, ಕೂಲಿ ಕಾರ್ಮಿಕರು ಮಹಿಳೆಯರು ತೊಂದರೆಗೆ ಒಳಗಾಗಿದ್ದು ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಸುಭಾಸ್ ಭೀಮಣ್ಣ ಶೇಷಗಿರಿ ಮನವಿ ವಾಚಿಸಿದರು. ರಾಜ್ಯ ಉಪಾಧ್ಯಕ್ಷ ಭೀಮಶಿ ವಾಲ್ಮೀಕಿ,

ತಾಲೂಕಾ ಉಪಾಧ್ಯಕ್ಷ ನೂರ ಅಹಮ್ಮದ್ ಮುಜಾವರ, ವೀರ ಶಿವಾಜಿ ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಪೂಜಾರ, ದಲಿತ ಸಂಘಟನೆ ಪ್ರಮುಖ ಅರ್ಜುನ ಬೆಂಗೇರಿ, ಜಯ ಕರ್ನಾಟಕ ಸಂಘಟನೆ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್, ಸಾಮಾಜಿಕ ಕಾರ್ಯಕರ್ತ ಹರೂಣ್ ಶೇಖ್ ಮುಂತಾದವರು ಮಾತನಾಡಿ, ಬೇಡಿಕೆಗೆ ಒತ್ತಾಯಿಸಿದರು.

ಉಪತಹಶೀಲ್ದಾರ ಎನ್.ಎಚ್. ರಾಘವೇಂದ್ರ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಬೇಡಿಕೆ ತಲುಪಿಸಲಾಗುವುದು ಎಂದರು. ಸಿಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು.