ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಮಾಸಿಕ ವೇತನ ಕನಿಷ್ಠ ₹36 ಸಾವಿರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹೊರಗುತ್ತಿಗೆ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಹೊರಡಿಸಿರುವ ಪರಿಸ್ಕೃತ ಕರಡು ಅಧಿಸೂಚನೆ ಪ್ರಕಾರ ಕನಿಷ್ಠ ವೇತನ ತಕ್ಷಣ ಜಾರಿ ಮಾಡಬೇಕು. ಮಾಸಿಕ ಕನಿಷ್ಠ ₹36 ಸಾವಿರ ವೇತನ ನೀಡಬೇಕು. ನಿವೃತ್ತಿವರೆಗೆ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಕೊಟ್ಟು ಕಾಯಂ ಮಾಡಬೇಕು. ಬಾಕಿ ಇರುವ ವೇತನ ತಕ್ಷಣ ನೀಡಬೇಕು. ಕಾರ್ಮಿಕ ಇಲಾಖೆಯ ಪ್ರಕಾರ ವಾರದ ರಜೆ, ಇಎಸ್ಐ, ಐಡಿ ಕಾರ್ಡ್, ಕರ ತುಂಬಿದ ರಶೀದಿ, ವೇತನ ಚೀಟಿ, ಸೇವಾ ಪ್ರಮಾಣಪತ್ರ, ಆದೇಶಪತ್ರ ನೀಡಬೇಕು. ತಮ್ಮ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆಯಬೇಕು. ಹಂಪಿ ಕವಿವಿಯ 48 ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳಿಂದ ವೇತನ ಪಾವತಿ ಆಗದ ಹಿನ್ನೆಲೆ ಕವಿವಿಗೆ ಆನುದಾನ ಬಿಡುಗಡೆ ಮಾಡಬೇಕು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಅಟೆಂಡರ್ ಗಳು, ಡಿ.ಗ್ರೂಪ್ ಸಿಬ್ಬಂದಿ ಕನಿಷ್ಠ ವೇತನ ಇಲ್ಲದೆ, ಯಾವುದೇ ಸೇವಾ ಭದ್ರತೆ ಇಲ್ಲದೆ ಹೊರಗುತ್ತಿಗೆ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರಕಾರ, ಕಾರ್ಮಿಕ ಇಲಾಖೆ ಪರಿಷ್ಕರಿಸಿ ಹೊರಡಿಸಿರುವ ಕರಡು ಅಧಿಸೂಚನೆ ಪ್ರಕಾರ ಕನಿಷ್ಠ ಮಾಸಿಕ 36 ಸಾವಿರ ವೇತನ ನೀಡಬೇಕು. ಅವರ ಸೇವೆ ಖಾಯಂಗೊಳಿಸಬೇಕು. ಅವರಿಗೆ ಎಲ್ಲಾ ರೀತಿಯ ಸೇವಾ ಭದ್ರತೆ ಒದಗಿಸಬೇಕು. ಸರಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಕುಮಾರ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಿಸಾಟಿ ತಾಯಪ್ಪ ನಾಯಕ, ಮುಖಂಡರಾದ ಸತ್ಯಮೂರ್ತಿ, ನಾಗನಾಯ್ಕ, ಕೊಟಗಿನಹಾಳ್ ಮಲ್ಲಿಕಾರ್ಜುನಯ್ಯ, ಸರೋಜಾ, ನಾಗಭೂಷಣ ಮತ್ತಿತರರಿದ್ದರು.