ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಘಟಕದಿಂದ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಘಟಕದಿಂದ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.ನಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರೇಣುಕಮ್ಮ ಮಾತನಾಡಿ, ಬಿಸಿಯೂಟ ಯೋಜನೆ ಜಾರಿಗೆ ಬಂದ ಮೇಲೆ ಶಾಲೆಗಳಲ್ಲಿ ಗೈರು ಹಾಜರಾತಿ, ಶಾಲಾ ಬಿಡುವಿಕೆ ಕಡಿಮೆಯಾಗಿ ಶಾಲಾ ಮಕ್ಕಳು ಮಧ್ಯಾಹ್ನದ ನಂತರದಲ್ಲಿಯೂ ಲವಲವಿಕೆಯಿಂದ ಅಭ್ಯಾಸದಲ್ಲಿ ತೊಡಗಿದ್ದಾರೆ. 2001ರಲ್ಲಿ ಬಂದಂತಹ ಯೋಜನೆ ಇಂದು ಕೋಟ್ಯಾಂತರ ಫಲಾನುಭವಿಗಳನ್ನು ಒಳಗೊಂಡಿದೆ. ಆದರೆ ಈ ಯೋಜನೆಗೆ 2014ರಿಂದ ನೀತಿ ಆಯೋಗದ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ತನ್ನ ಪಾಲಿನ ವಂತಿಗೆಯನ್ನು ಶೇ.90 ರಿಂದ ಶೇ.60ಗೆ ಇಳಿಸಿದೆ. 26 ಲಕ್ಷ ಮಹಿಳೆಯರು ಅಡುಗೆ ತಯಾರಿಕರಾಗಿ ಪ್ರತಿನಿತ್ಯ ದುಡಿಯುತ್ತಿದ್ದಾರೆ ಎಂದು ಹೇಳಿದರು.
2009 ರಿಂದ ಕೇವಲ ₹600ಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿಯಾದರೂ ಕನಿಷ್ಠ ವೇತನ ನೀಡಬೇಕು. ಈಗಾಗಲೇ ಮಾಡುತ್ತಿರುವ 6 ಗಂಟೆ ಕೆಲಸದ ಅವಧಿಯ ಹೆಚ್ಚಳದ ಆದೇಶ ಹೊರಡಿಸಬೇಕು. ಯಾವುದೇ ಸ್ವರೂಪದಲ್ಲಿಯೂ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. ₹10 ಸಾವಿರ ನಿವೃತ್ತಿ ವೇತನ ನೀಡಬೇಕು. ಐಎಲ್ಸಿ ಶಿಫಾರಸ್ಸಿನಂತೆ ಉದ್ಯೋಗಸ್ಥರೆಂದೂ ಪರಿಗಣಿಸಿ ಶಾಸನಬದ್ಧ ಸವಲತ್ತುಗಳನ್ನು ಕೊಡಬೇಕು. ಕೆಪಿಎಸ್ ಶಾಲೆಗಳ ಪರಿಕಲ್ಪನೆಯಿಂದ ಶಾಲೆಗಳು ವಿಲೀನವಾದಾಗ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್ ಮನವಿ ಪತ್ರ ಹಾಗೂ ಮುಷ್ಕರದ ನೋಟಿಸ್ ನೀಡಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷದೆ ವಿಶಾಲಾಕ್ಷಿ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಸದಸ್ಯರಾದ ಅನುಸೂಯ ಕಲಮಂಗಿ, ಶಾರದಾ ತುರ್ವಿಹಾಳ, ಶ್ರೀದೇವಿ ಸುಕಾಲಪೇಟೆ, ವಾಣಿ ಎಸ್.ಖಾದ್ರಿ, ಶರಣಮ್ಮ ಜಿ., ಎಂ.ಗೋಪಾಲಕೃಷ್ಣ ಭಾಗವಹಿಸಿದ್ದರು.