ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ಮಂಗಳವಾರ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಮಡಿಕೇರಿ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ಮಂಗಳವಾರ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಪಂ ನೌಕರರು ಕಳೆದ 7-8 ವರ್ಷಗಳಿಂದ ವೇತನ ಪರಿಷ್ಕರಣೆಯಾಗದಿರುವುದರಿಂದ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಈಗ ನೀಡುತ್ತಿರುವ ವೇತನ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಾಕಾಗುತ್ತಿಲ್ಲ ಎಂದು ಹೇಳಿದರು.ಪಿ.ಆರ್. ಭರತ್ ಮಾತನಾಡಿ, ಸರ್ಕಾರ ದುಡಿಯುವ ವರ್ಗಕ್ಕೆ ಸಹಾಯ ಮಾಡಬೇಕು. ಬೆಲೆ ಏರಿಕೆಗೆ ಅನುಗುಣವಾಗಿ 2026ರ ಮೇ 22ರಂದು ಹೊರಡಿಸಿರುವ ಆದೇಶದನ್ವಯ ವೇತನ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛ ವಾಹಿನಿ ಮಹಿಳಾ ವಾಹನ ಚಾಲಕಿಯರು ಹಾಗೂ ಕಸ ಗುಡಿಸುವ ಮಹಿಳೆಯರು ಸುಮಾರು 1-2 ವರ್ಷದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಸರ್ಕಾರ ಸಂಜೀವಿನಿ ಒಕ್ಕೂಟದಿಂದ ಬೇರ್ಪಡಿಸಿ ಪಂಚಾಯಿತಿ ಮೂಲಕ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಬೇಡಿಕೆಗಳು: ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕ ಕಾಲಕ್ಕೆ ಸರ್ಕಾರಿ ನೌಕರರು ಎಂದು ಘೋಷಿಸಬೇಕು. ಸೇವಾ ಹಿರಿತನವನ್ನು ಪರಿಗಣಿಸಿ 5 ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ 750, 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ 1500, 15 ವರ್ಷ ಮೇಲ್ಪಟ್ಟು 3,000 ಇನ್‌ಕ್ರಿಮೆಂಟ್ ನೀಡಬೇಕು.ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ, 6 ಲಕ್ಷ ಇಡುಗಂಟು ಘೋಷಿಸಬೇಕು. ಗ್ರಾಪಂನಲ್ಲಿ ಠರಾವು ಮೂಲಕ ನೇಮಕಾತಿಯಾಗಿರುವ ಸಿಬ್ಬಂದಿಗೆ ಜಿಪಂನಿಂದ ಅನುಮೋದನೆ ಆಗದೆ ಇದ್ದರೂ ಅಂತಹ ಸಿಬ್ಬಂದಿಗಳಿಗೂ ಇಡಗಂಟು ನೀಡಲು ಆದೇಶ ಹೊರಡಿಸಬೇಕು.ತರಬೇತಿ ಪಡೆದಿರುವ ಎಲ್ಲ ಸ್ವಚ್ಛ ವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ಪದ್ಧತಿ ರದ್ದು ಪಡಿಸಬೇಕು. 15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಗ್ರಾ ಪಂಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತ. ಆದರೆ ಈಗಾಗಲೇ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ಮುಂದುವರೆಸಬೇಕು. ಅಲ್ಲದೇ ಈಗಾಗಲೇ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೆ ಅವಕಾಶ ನೀಡಬೇಕು.ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕೆ, 2017ರ ಒಳಗೆ ಇರುವ ಹೆಚ್ಚುವರಿ ಕರ ವಸೂಲಿಗಾರರಿಗೆ ಅನುಮೋದನೆ ನೀಡಬೇಕು. ಮೊದಲನೇ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸ್ಪರ್ಶಿ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕು ಎಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ಒದಗಿಸಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು. ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಗ್ರಾಪಂಗಳನ್ನು ಜನಸಂಖ್ಯೆಗನುಗುಣವಾಗಿ ಮೇಲ್ದರ್ಜೆಗೇರಿಸಬೇಕು. ಪಿಡಿಒ ಹುದ್ದೆಗೆ ಶೇ.60 ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯಮಂತ್ರಿ, ಪಂಚಾಯತ್ ರಾಜ್ ಸಚಿವರು ಹಾಗೂ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು.ಸ