ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರ ನಿವಾಸದ ಎದುರು ಎಬಿವಿಪಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರ ನಿವಾಸದ ಎದುರು ಎಬಿವಿಪಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ರಾಜ್ಯದಲ್ಲಿ ಶಾಲಾ - ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ ಎಂದರು.
ಎಲ್ಲ ಕ್ಷೇತ್ರಗಳಿಗೂ ಉತ್ತಮ, ವಿದ್ಯಾವಂತ, ಕೌಶಲ್ಯವುಳ್ಳ ಹಾಗೂ ಪ್ರಾಮಾಣಿಕ ವ್ಯಕ್ತಿಗಳನ್ನು ಶಿಕ್ಷಣ ನೀಡುತ್ತಿದೆ. ಆ ಕ್ಷೇತ್ರಕ್ಕೆ ಎಲ್ಲ ಸೌಲಭ್ಯಗಳನ್ನು ಕೊಡುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು. ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾದ ನಂತರ ಸರಿಯಾದ ಸಮಯಕ್ಕೆ ಬಸ್ ಪಾಸ್ ನೀಡದಿರುವುದು, ಸ್ತ್ರೀ ಶಕ್ತಿ ಯೋಜನೆಯಿಂದ ಅತಿ ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಓಡಾಟ ಮಾಡುತ್ತಿರುವುದರಿಂದ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡದೆ ವಿದ್ಯಾರ್ಥಿಗಳು ದಿನನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಕಳೆದ ವರ್ಷದ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗಿಲ್ಲ. ಮಾತ್ರವಲ್ಲ, ಶಾಲಾ ಕಾಲೇಜುಗಳು ಪ್ರಾರಂಭವಾದ ಒಂದು ತಿಂಗಳ ನಂತರ ಹಾಸ್ಟೆಲ್ ಅರ್ಜಿಯನ್ನು ಪ್ರಾರಂಭ ಮಾಡಲಾಯಿತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳ ಸಂಖ್ಯೆ ಇರದೇ ಇರುವುದು, ವಿವಿಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬಹಳಷ್ಟು ಬದಲಾವಣೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸಚಿವರಾದ ತಾವು ಈ ಬಗ್ಗೆ ಗಮನಹರಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಮಲ್ಲಿಕಾರ್ಜುನ ಮಾಳಿ, ಸಂದೀಪ ಅರಳಿಗುಂಡಿ, ಅಭಿಷೇಕ ಬಿರಾದಾರ, ಕವಿತಾ ಬಿರಾದಾರ, ಶ್ರೀಕಾಂತ ರೆಡ್ಡಿ , ಶಿವನಗೌಡ ಬಿರಾದಾರ, ಬಾಲಾಜಿ, ವಿನಾಯಕ, ಶಿಲ್ಪಾ, ಸಾವಿತ್ರಿ, ಸ್ನೇಹಾ, ಬಸವರಾಜ, ಸುಮಾ, ಶ್ರೀಶೈಲ ಹಾಗೂ ಇತರರು ಉಪಸ್ಥಿತರಿದ್ದರು.