ವಿಶೇಷಚೇತನರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Aug 31 2024, 01:33 AM IST

ಸಾರಾಂಶ

ವಿಕಲಚೇತನರಿಗೆ ಮಾಸಿಕ ಪಿಂಚಣಿ 10ಸಾವಿರಕ್ಕೆ ಹೆಚ್ಚಿಸಬೇಕು, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಅನುಗುಣವಾಗಿ ಉದ್ಯೋಗ ನೀಡಬೇಕು, ಉಚಿತವಾಗಿ ಸಾರಿಗೆ ಸೇವೆ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ರಾಯಚೂರು

ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ (ಎಂಆರ್‌ಡಬ್ಲ್ಯೂ/ವಿಆರ್‌ಡಬ್ಲ್ಯೂ/ಯುಆರ್‌ಡಬ್ಲ್ಯೂ) ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶುಕ್ರವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದೇಶ (ಎಂಆರ್‌ಡಬ್ಲ್ಯೂ) ಗ್ರಾಮೀಣ ಹಾಗೂ ನಗರ ಪುನರ್ವಸತಿ (ವಿಆರ್‌ಡಬ್ಲ್ಯೂ ಮತ್ತು ಯುಆರ್‌ಡಬ್ಲ್ಯೂ) ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಸ್ಥಳೀಯ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಮುಖ್ಯರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಅಂಗವಿಕಲರ ಹಕ್ಕುಗಳ ಕಾಯ್ದೆ-2016 ಸಮರ್ಪಕವಾಗಿ ಅನುಷ್ಠಾನವಾಗದ ಕಾರಣಕ್ಕೆ, ವಿಕಲಚೇತನರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕಾಯ್ದೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರು ಸಹ ಅವುಗಳನ್ನು ಅನುಷ್ಠಾನ ಮಾಡದ ಕಾರಣಕ್ಕೆ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ ಎಂದು ಅಳಲು ತೋಡಿಕೊಂಡರು.

ವಿಕಲಚೇತನರಿಗೆ ಮಾಸಿಕ ಪಿಂಚಣಿ 10ಸಾವಿರಕ್ಕೆ ಹೆಚ್ಚಿಸಬೇಕು, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಅನುಗುಣವಾಗಿ ಉದ್ಯೋಗ ನೀಡಬೇಕು, ಉಚಿತವಾಗಿ ಸಾರಿಗೆ ಸೇವೆ ಕಲ್ಪಿಸಬೇಕು, ಅಂಗವಿಕಲರ ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ಅನುದಾನ ಒದಗಿಸಬೇಕು, ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿ ಅಲ್ಲಿಂದ ಜಿಲ್ಲಾ ಮಟ್ಟದಲ್ಲಿ ಸಭೆ ಕೈಗೊಂಡ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಸಂಸದರು, ಶಾಸಕರ ಅನುದಾನದಲ್ಲಿ ವಿಕಲಚೇತನರಿಗೆ ಕಲ್ಪಿಸಲಾಗುತ್ತಿರುವ ಸವಲತ್ತುಗಳನ್ನು ಸಮರ್ಪಕವಾಗಿ ನೀಡುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಜೆ.ನಾಗರಾಜ, ಮುಖಂಡರಾದ ಕರಿಯಪ್ಪ ಅಚೋಳ್ಳಿ, ಹೊನ್ನಪ್ಪ, ಶೇಖರಪ್ಪ ಮುರ್ಕಿಗುಡ್ಡ, ಮಲ್ಲಪ್ಪ, ರಾಜಶೇಖರ, ಬಸವರಾಜ ಗೋರೆಬಾಳ, ಸಂತೋಷ ಕುಮಾರ, ವೀರೇಶ, ಮಲ್ಲೇಶ, ಅಂಬಮ್ಮ ಸೇರಿದಂತೆ ಜಿಲ್ಲೆ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿಕಲಚೇತನರು, ಪಾಲಕರು ಇದ್ದರು.

ಅ.1 ಕ್ಕೆ ರಾಜ್ಯಮಟ್ಟದ ಹೋರಾಟ

ಅಂಗವಿಕಲರ ಹತ್ತು ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುವ ಅ.1ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜೆ.ನಾಗರಾಜ ತಿಳಿಸಿದರು.ಹೋರಾಟಕ್ಕು ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟದಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿಯ ಸ್ಥಳೀಯ ಆಡಳಿತದ ಗಮನಕ್ಕೆ ತರಲಿದ್ದು ನಂತರ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹೋರಾಟ ಮಾಡಿ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸಲಾಗುವುದು ಎಂದರು.