ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಲಿ: ಎಸ್.ಎಸ್. ಪಾಟೀಲ

| Published : Sep 04 2025, 01:01 AM IST

ಸಾರಾಂಶ

ಅತಿಯಾದ ಮಳೆಯಿಂದ ಬೆಳೆಹಾನಿ ಆಗಿರುವುದರಿಂದ ಸರ್ಕಾರ ರೈತರ ಕೃಷಿ ಸಾಲ ಸಂರ್ಪೂಣ ಮನ್ನಾ ಮಾಡಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಅವರು ನರಗುಂದ ತಹಸೀಲ್ದಾರ್‌ಗೆ ಮನವಿ ನೀಡಿದರು.

ನರಗುಂದ: ಸರ್ಕಾರ ರೈತರ ಕೃಷಿ ಸಾಲ ಸಂರ್ಪೂಣ ಮನ್ನಾ ಮಾಡಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಬುಧವಾರ ತಹಸೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆನಂತರ ಅವರು ಮಾತನಾಡಿದರು. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಬೆಳೆಗಳು ಕಟಾವು ಹಂತದಲ್ಲಿ ಹಾನಿಗೀಡಾಗಿದೆ ಎಂದು ಹೇಳಿದರು.

ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ನರಗುಂದ ತಾಲೂಕಿನಾದ್ಯಂತ ಪೂರ್ವ ಮುಂಗಾರು ಹಾಗೂ ಮುಂಗಾರು ಋತುಮಾನದಲ್ಲಿ ಬೆಳೆದ ಹೆಸರು, ಗೋವಿನಜೋಳ, ಹತ್ತಿ, ಶೇಂಗಾ ಹಾಗೂ ಇತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ, ಮೆನಸಿನಕಾಯಿ ಬೆಳೆಗಳು ನಾಶವಾಗಿವೆ. ಅದರಲ್ಲಿ ಹೆಸರು ಬೆಳೆ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್ ಇಳುವರಿ ಬರಬೇಕಿತ್ತು. ಆದರೆ ಈಗ ಅಲ್ಪಸ್ವಲ್ಪ ಉಳಿದಿವೆ. ಕಟಾವಿನ ಬಾಡಿಗೆ ಖರ್ಚೂ ಬರುವುದಿಲ್ಲ. ಅತಿಯಾದ ಮಳೆಯಿಂದ ಮೆಕ್ಕೆಜೋಳ ತೆನೆ ಕಟ್ಟಿಲ್ಲ. ಇದೇ ರೀತಿ ರೈತ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಸಂಪೂರ್ಣ ಕೊಳೆತು ಹೋಗಿವೆ. ಪ್ರತಿ ಎಕರೆಗೆ ₹10ರಿಂದ ₹20 ಸಾವಿರದ ವರೆಗೆ ಖರ್ಚು ಮಾಡಿದ್ದಾರೆ. ರೈತನಿಗೆ ನಷ್ಟ ಉಂಟಾಗಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್‌, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಬೆಳೆ ಸಾಲ ಪಡೆದಿದ್ದಾರೆ. ಈಗ ರೈತರಿಗೆ ಬೆಳೆಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕು. ಹಿಂಗಾರು ಬೆಳೆ ಬಿತ್ತನೆ ಮಾಡಲು ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಹಣವನ್ನು ಪ್ರತಿ ಹೆಕ್ಟೇರಿಗೆ ₹50 ಸಾವಿರ ನೀಡಬೇಕು. ಇದರಲ್ಲಿ ಏನಾದರೂ ಸರ್ಕಾರ ತಾರತಮ್ಯ ಮಾಡಿದರೆ ನಾವು ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿದರು. ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳಾದ ನಾಗೇಶ ಅಪೋಜಿ, ಅಣ್ಣಪ್ಪ ಮಾನೆ, ವಿಠ್ಠಲ ಮುಧೋಳೆ, ಮುತ್ತು ಯಲಿಗಾರ, ಎಸ್.ಎಸ್. ಸಾಠೆ, ದಾನಪ್ಪ, ಯೋಗೇಶ ಗುಡಾರದ ಇದ್ದರು.