ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಹಿಂದಿ ಭಾಷೆಯಲ್ಲಿರುವ ನಾಮಫಲಕಗಳು ಮತ್ತು ಕೆಲವು ಜಾಹೀರಾತುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆಯ ಜಿಲ್ಲಾ ಶಾಖೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಹಿಂದಿ ಭಾಷೆಯಲ್ಲಿರುವ ನಾಮಫಲಕಗಳು ಮತ್ತು ಕೆಲವು ಜಾಹೀರಾತುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆಯ ಜಿಲ್ಲಾ ಶಾಖೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ, ಶೇ. 40ರಷ್ಟು ಆಂಗ್ಲ ಭಾಷೆ ಬಳಸಬೇಕೆಂದಿದೆ. ಆದರೆ, ರಾಜ್ಯ ಸಾರಿಗೆ ಸಂಸ್ಥೆ ಈ ನಿಯಮವನ್ನು ಗಾಳಿಗೆ ತೂರಿ ಹಿಂದಿ ಭಾಷೆಯ ನಾಮಫಲಕಗಳು ಬಸ್‌ಗಳಲ್ಲಿ ರಾರಾಜಿಸುವಂತೆ ಮಾಡುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ನಿಯಮ ಉಲ್ಲಂಘನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹಿಂದಿ ಭಾಷೆಯ ವಿಮಲ್ ಗುಟ್ಕಾದ ಜಾಹೀರಾತುಗಳು, ಚಪ್ಪಲಿ, ಚಡ್ಡಿ, ಬನಿಯನ್, ಇತರೆ ವಸ್ತುಗಳ ಜಾಹೀರಾತುಗಳನ್ನು ಹಾಕಿದ್ದನ್ನು ತಕ್ಷಣದಲ್ಲಿ ತೆರವುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯದ ಪ್ರತಿ ಜಿಲ್ಲೆಯ ಪ್ರವಾಸಿ ತಾಣಗಳು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರನ್ನು ಉತ್ತೇಜಿಸುವ ಚಿತ್ರಗಳನ್ನು ಬಸ್‌ಗಳ ಮೇಲೆ ಹಾಕಬೇಕು. ದೇಶದ ಸೈನಿಕರ ಮತ್ತು ದೇಶ ಪ್ರೇಮಿಗಳ ಭಾವಚಿತ್ರಗಳನ್ನು ಅವರ ಇತಿಹಾಸಗಳೊಂದಿಗೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.ತಕ್ಷಣದಲ್ಲಿ ರಾಜ್ಯಾದ್ಯಂತ ಬಸ್‌ಗಳಲ್ಲಿ ಪ್ರದರ್ಶಿತವಾಗಿರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಗುಟ್ಕಾ ತಿನ್ನುವ ಚಟ ಹೆಚ್ಚಿಸುವ ಜಾಹೀರಾತುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆಎಸ್‌ಆರ್‌ಟಿಸಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಹದಗೆಟ್ಟಿದ್ದು, ಗಬ್ಬು ನಾತ ಬೀರುತ್ತಿದೆ. ಇತ್ತೀಚೆಗಷ್ಟೇ ಮಹಿಳಾ ಆಯೋಗದ ಅಧ್ಯಕ್ಷರು ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಕೂಡ ಪರಿಸ್ಥಿತಿ ಸುಧಾರಿಸಿಲ್ಲ. ಮೂತ್ರ ವಿಸರ್ಜನೆಗೂ ಹಣ ವಸೂಲಿ ಮಾಡುತ್ತಿದ್ದಾರೆ. ಅದರಲ್ಲೂ ದೂರದಿಂದ ಬಳಲಿ ಬಂದಿರುವ ಮಹಿಳೆಯರಿಗೂ ೧೦ ರು. ಪಡೆಯುತ್ತಿದ್ದಾರೆ. ಹಣವಿಲ್ಲದವರು ಅಸಹಾಯಕರಾಗಿ ವಾಪಸ್ ತೆರಳುತ್ತಿದ್ದು, ಸ್ವಚ್ಛತೆಯ ಕೊರತೆಯಿಂದ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಉಚಿತ ಬಸ್ ಸೌಲಭ್ಯ ಮಹಿಳೆಯರಿಗೆ ನೀಡಿದ ಸರ್ಕಾರ ಕೂಡಲೇ ಅವರಿಗೆ ಅತ್ಯಗತ್ಯವಾದ ಶೌಚಾಲಯ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಬೇಕು. ಮತ್ತು ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.ಕನ್ನಡ ಬಿಟ್ಟು ಬೇರೆ ಭಾಷೆಯ ಜಾಹೀರಾತುಗಳು ಅಲ್ಲದೇ ನಿಕೃಷ್ಟ ದುರಭ್ಯಾಸವನ್ನು ಯುವಕರಲ್ಲಿ ಪ್ರಚೋದಿಸುವ ಜಾಹೀರಾತುಗಳನ್ನು ಕೂಡಲೇ ಸಾರಿಗೆ ಬಸ್ ಗಳಿಂದ ತೆರವುಗೊಳಿಸಿದಿದ್ದರೆ ಮುಂದಿನ ದಿನಗಳಲ್ಲಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದರೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ರಾಮಚಂದ್ರ ಅವರು ಮಾತನಾಡಿ, ಕೆ.ಎಸ್.ಆರ್.ಟಿ.ಸಿ. ಮುಖ್ಯ ಕಚೇರಿಗೆ ಮನವಿಯನ್ನು ರವಾನೆ ಮಾಡಿ ಸೂಕ್ತ ಕ್ರಮಕ್ಕೆ ತಾವು ಕೂಡ ಒತ್ತಾಯಿಸುವುದಾಗಿ ಹೇಳಿದರು.ಪ್ರತಿಭಟನೆಯಲ್ಲಿ ಕರವೇ ಸಿಂಹಸೇನೆ ರಾಜ್ಯಾಧ್ಯಕ್ಷ ಎಂ. ರವಿಪ್ರಸಾದ್, ಜಿಲ್ಲಾಧ್ಯಕ್ಷ ಮಧುಸೂದನ್, ಪ್ರಧಾನ ಕಾರ್ಯದರ್ಶಿ ಅಭಿಜಿತ್, ಪ್ರಮುಖರಾದ ಎಂ.ನಯಾಜ್ , ಕಾರ್ತಿಕ್ ಆರ್, ಪೂಜಾರಿ, ಪ್ರಶಾಂತ್ ರೆಡ್ಡಿ, ಗಿರೀಶ್, ರಘು, ಮುಕುಂದಕುಮಾರ್, ಎಸ್. ಭರತ್, ಮೊದಲಾದವರಿದ್ದರು.