ಹಿಂದೂ ಜನಜಾಗೃತಿ ಸಮಿತಿಯ ಮುಖ್ಯಸ್ಥ ವಿಠೋಭಾ ಮಾಳ್ಸೇಕರ ಅವರ ಮುಂದಾಳತ್ವದಲ್ಲಿ ತಾಲೂಕು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯಕರ್ತರ ನಿಯೋಗವು ತಾಲೂಕಾಡಳಿಕ ಸೌಧಕ್ಕೆ ತೆರಳಿ ಗ್ರೇಡ್- 2 ತಹಸೀಲ್ದಾರ್ ರವೀಂದ್ರ ನೇಸರ್ಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಹಳಿಯಾಳ: ಎಲ್ಲರಿಗೂ ಸಮಾನವಾದ ಕಾನೂನು ಮಾನದಂಡ ಅನ್ವಯಿಸುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ತಾಲೂಕು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ ಮಾಡಿದೆ.

ಹಿಂದೂ ಜನಜಾಗೃತಿ ಸಮಿತಿಯ ಮುಖ್ಯಸ್ಥ ವಿಠೋಭಾ ಮಾಳ್ಸೇಕರ ಅವರ ಮುಂದಾಳತ್ವದಲ್ಲಿ ತಾಲೂಕು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯಕರ್ತರ ನಿಯೋಗವು ತಾಲೂಕಾಡಳಿಕ ಸೌಧಕ್ಕೆ ತೆರಳಿ ಗ್ರೇಡ್- 2 ತಹಸೀಲ್ದಾರ್ ರವೀಂದ್ರ ನೇಸರ್ಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಪ್ರಮುಖ ಬೇಡಿಕೆಗಳು: ಕಳೆದ 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪುನೀತ್ ಕೆರೆಹಳ್ಳಿ ಅವರ ಆರೋಗ್ಯ ಗಂಭೀರವಾಗುತ್ತಿದ್ದು, ಸ್ವತಂತ್ರ ವೈದ್ಯಕೀಯ ತಂಡದಿಂದ ತಕ್ಷಣ ತಪಾಸಣೆ ನಡೆಸಿ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.

ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಹಚರರ ಮೇಲೆ ದಾಖಲಿಸಿರುವ ಏಕಪಕ್ಷೀಯ ಸುಳ್ಳು ಎಫ್ಐಆರ್ ಕೂಡಲೇ ರದ್ದುಪಡಿಸಬೇಕು.

ಘಟನಾ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು. ಸಾಕ್ಷ್ಯ ನಾಶಪಡಿಸಲು ಯತ್ನಿಸಿದವರ ವಿರುದ್ಧ ಮತ್ತು ಅಂದು ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಜರುಗಿಸಬೇಕು.

ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೀಡಿರುವ ವಿಚಾರಣಾ ನೋಟಿಸ್ ಹಾಗೂ ರಾಜ್ಯದ ವಿವಿಧೆಡೆ ಹಿಂದೂ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಗಡಿಪಾರು ಮತ್ತು ಗುಂಡಾ ಕಾಯಿದೆ ನೋಟಿಸ್‌ಗಳ ರಾಜಕೀಯ ದುರುಪಯೋಗವನ್ನು ತಡೆಯಲು ಉನ್ನತ ಮಟ್ಟದ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಲೂಕು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನಿಯೋಗದಲ್ಲಿ ತಾಲೂಕಿನ ಪ್ರಮುಖರಾದ ಮಂಜುನಾಥ ಮೋರೆ, ಉಮೇಶ ದೇಶಪಾಂಡೆ, ಸುಭಾಷ ಗೋಕಾವಿ, ಸದಾನಂದ ಬಾಳೆಕುಂದ್ರಿ, ವಿನೋದ ಗಿಂಡೆ, ಶಂಕರ ರೇಣಕೆ, ವಿಜಯ ಫಡ್ನಿಸ್, ಸಂತೋಷ ಘಟಕಾಂಬಳೆ, ಬಸವರಾಜ ಬೆಂಡಿಗೇರಿಮಠ, ಸುಧಾ ಶೆಟ್ಟಿ, ಅಭಿಷೇಕ ಮಸೂರಕರ್ ಇತರರು ಉಪಸ್ಥಿತರಿದ್ದರು.