ಮಹಿಳಾ ದೌರ್ಜನ್ಯದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

| Published : Jul 24 2025, 12:45 AM IST

ಸಾರಾಂಶ

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು ಹಾಗೂ ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲುಕಿ ಜನತೆಯಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ.

ಧಾರವಾಡ: ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಕೊಲೆ, ಅತ್ಯಾಚಾರ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಬುಧವಾರ ಎಐಎಂಎಸ್ಸೆಸ್‌ ಜಿಲ್ಲಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು ಹಾಗೂ ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲುಕಿ ಜನತೆಯಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ. ಅತ್ಯಾಚಾರಕ್ಕೊಳಗಾದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರ, ಮಹಿಳೆಯರ ಶವಗಳನ್ನು 1995ರಿಂದ 2014ರ ನಡುವೆ ಅಲ್ಲಿ ಸುತ್ತಮುತ್ತ ಹೂತಿದ್ದೇನೆ ಎಂದು ಧರ್ಮಸ್ಥಳದ ಮಾಜಿ ಪೌರಕಾರ್ಮಿಕ ಎನ್ನಲಾದ ವ್ಯಕ್ತಿಯ ದೂರನ್ನು ಆಧರಿಸಿ ಎಫ್.ಐ.ಆರ್. ಮಾಡಲಾಗಿದೆ. ಅವರು ಹೂತಿರುವ ಬಹುಪಾಲು ಶವಗಳು ಬಾಲಕಿಯರು ಮತ್ತು ಮಹಿಳೆಯರದ್ದು ಎಂಬುದು ಬಹಳ ಅಘಾತಕಾರಿ ವಿಷಯ.

ಈ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿವೆ. ಅಲ್ಲದೆ, ಈ ಪ್ರಕರಣಗಳ ವಿರುದ್ಧ ಹಲವಾರು ವರ್ಷಗಳಿಂದ ಪ್ರತಿರೋಧಗಳು, ಹೋರಾಟಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗಷ್ಟೆ ಈ ನೂರಾರು ಶವಗಳ ಸಮಾಧಿ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು (ಎಸ್.ಐ.ಟಿ.) ವಿಶೇಷ ತನಿಖಾ ದಳವನ್ನು ನೇಮಿಸಿದೆ.

ಹಾಗಾಗಿ ಈ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಈ ನೂರಾರು ಸಾವುಗಳ ಕುರಿತು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ತಪ್ಪಿತಸ್ಥರು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಎಷ್ಟೇ ಪ್ರಭಾವಿ ವಲಯದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ಜಿಲ್ಲಾ ಅಧ್ಯಕ್ಷೆ ಮಧುಲತಾ ಗೌಡರ್, ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ, ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್ ಇದ್ದರು.