ಡಾ.ಸ್ವಾಮಿನಾಥನ್‌ ಆಯೋಗ ವರದಿ ಜಾರಿಗೆ ಆಗ್ರಹ

| Published : Dec 17 2024, 01:00 AM IST

ಸಾರಾಂಶ

ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ದರ ದೊರಕಿಸಿಕೊಡುವಲ್ಲಿ ಡಾ.ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸಬೇಕು, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮಕ್ಕೆ ತಂದ ತಿದ್ದುಪಡಿ ರದ್ದುಗೊಳಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ, ರೈತರ ಸಾಲ ವಸೂಲಾತಿ ಪ್ರಕ್ರಿಯೆ ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿ ನೇತೃತ್ವದಲ್ಲಿ ಸಹಸ್ರಾರು ರೈತರು ಸೋಮವಾರ ಸುವರ್ಣಸೌಧ ಗಾರ್ಡನ್‌ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬರ ಪರಿಹಾರ ಹಾಗೂ ಬೆಳೆವಿಮೆ ಸರಿಯಾಗಿ ರೈತರಿಗೆ ಸಿಗಬೇಕು, ರೈತ ವಿರೋಧಿ ಕೃಷಿ ಕಾನೂನು ತಿದ್ದುಪಡಿ ಹಿಂಪಡೆಯಬೇಕು. ಭೂಸ್ವಾಧೀನ ಕಾಯ್ದೆ ಪರಿಷ್ಕರಣೆ ಮಾಡಬೇಕು. ರೈತರಿಗೆ ಹಗಲು ಹೊತ್ತು ನಿರಂತರ 12 ಗಂಟೆ ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯತ್‌ ಕೊಡಬೇಕು. ಎಲ್ಲ ಪಂಪಸೆಟ್ ಅಕ್ರಮ-ಸಕ್ರಮ ಮುಂದುವರಿಸಬೇಕು. ರಾಜ್ಯದಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪನಶ್ಚೇತನಗೊಳಿಸಿ, ಬಾಕಿ ಉಳಿದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ರಾಜ್ಯ ಎಲ್ಲ ಜಲಾಶಯ ಹಾಗೂ ಕೆರೆಗಳ ಹೂಳು ತೆಗೆಯಬೇಕು. ಆಲಮಟ್ಟಿ ಜಲಾಶಯ ಎತ್ತರಿಸಬೇಕು. ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್‌ಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಸರಳ ಸಾಲ ಸಿಗುವಂತೆ ಮಾಡಬೇಕು. 60 ವರ್ಷ ಮೇಲ್ಪಟ್ಟ ರೈತರಿಗೆ ಕನಿಷ್ಟ ₹6000 ಮಾಸಾಶನ ನೀಡಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ರೈತ ಕಾರ್ಮಿಕ ಕಾರ್ಡ್‌ ನೀಡಿ ಎಲ್ಲ ಸವಲತ್ತು ಒದಗಿಸವಬೇಕು. ರೈತ ಹೋರಾಗಾರರ ಮೇಲಿ ಕೇಸ್ ಹಿಂಪಡೆಯಬೇಕು. ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಒಳಪಡಿಸಬೇಕು. ಬಗರ್ ಹುಕುಂ ಹಾಗೂ ಅರಣ್ಯ ಒತ್ತುವರಿ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ರಾಜ್ಯದ ಎಲ್ಲ ಸಹಕಾರಿ ರಂಗದ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬೇಕು. ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಬೇಕು, ರೈತರಿಗೆ ₹5 ಲಕ್ಷವರೆಗೆ ಯಾವುದೇ ಶೋರಿಟಿ ಇಲ್ಲದೇ ಸಾಲ ನೀಡಬೇಕು. ಕೃಷಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳಿಗೆ ತೆರಿಗೆ ಹಾಗೂ ಮುದ್ರಾಂಕ ಶುಲ್ಕ ರದ್ದುಗೊಳಿಸಬೇಕು, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು. ರೈತರ ಜಮೀನುಗಳಿಗೆ ಸರ್ವೇ ನಂಬರ್‌ಗಳಿಗೆ ಕಡ್ಡಾಯವಾಗಿ ರಸ್ತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.