ಸಾರಾಂಶ
ಮೂವತ್ತು ವರ್ಷಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಸಹಕಾರದಿಂದ ಸುಪ್ರಿಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಒಂದು ವರ್ಷ ಗತಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕುಂಟು ನೆಪವೊಡ್ಡಿ ವಿಳಂಬ ಮಾಡುತ್ತಿದೆ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಮೂವತ್ತು ವರ್ಷಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಸಹಕಾರದಿಂದ ಸುಪ್ರಿಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಒಂದು ವರ್ಷ ಗತಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕುಂಟು ನೆಪವೊಡ್ಡಿ ವಿಳಂಬ ಮಾಡುತ್ತಿದೆ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಯಾ ರಾಜ್ಯಗಳ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಿ ಎಂದರೂ ಸಚಿವ ಎಚ್‌ಸಿ ಮಹಾದೇವಪ್ಪ ಅವರ ಕುತಂತ್ರದಿಂದ ಸಿಎಂ ಅವರು ಜಾರಿಗೆ ಮೀನಾ ಮೇಷ ಎಣಿಸುತ್ತಿದ್ದಾರೆ. ನಾವು ಜಾತಿ ಜನಗಣತಿ ಮಾಡಿ ಎಂದು ಹೇಳಿಲ್ಲ ಆದರೂ ಸರ್ಕಾರ ಮಾಡುತ್ತಿದೆ. ಇದುವರೆಗೆ ಕೇವಲ ಶೇ. 80ರಷ್ಟು ಜಾತಿ ಜನಗಣತಿ ಮಾತ್ರ ಮಾಡಲಾಗಿದೆ. ಏನೇ ಆದರೂ ನಮಗೆ ಹಸಿವಾಗಿದೆ. ನಮ್ಮ ಪಾಲಿನ ಶೇ. 6 ರಷ್ಟು ಪ್ರತಿಶತ ಒಳಮೀಸಲಾತಿ ಜಾರಿ ಮಾಡಿ ಎಂದರೂ ಸರ್ಕಾರ ನಮ್ಮ ಕೂಗು ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಒಕ್ಕೂಟದ ವತಿಯಿಂದ ಆ. 1ರಂದು ಬೆಳಿಗ್ಗೆ 11 ಗಂಟೆಗೆ ಅರೆಬೆತ್ತಲೆಯಾಗಿ ಸರ್ಕಾರದ ಶವಯಾತ್ರೆಯ ಮೆರವಣಿಗೆ ಮುಖಾಂತರ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಇದೇ ವೇಳೆ ಮಾದಿಗ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ವಿಜಯಕುಮಾರ ಹಿಪ್ಪಳಗಾಂವ್, ಕಮಲಾಕರ ಹೆಗಡೆ, ಜಾಫೆಟರಾಜ ಕಡ್ಯಾಳ, ವೀರಶೆಟ್ಟಿ, ರವೀಂದ್ರ ಸೂರ್ಯವಂಶಿ, ಜೈಶೀಲ ಮೇತ್ರೆ, ಡೆವಿಡ ವಾಡೆಕರ, ವಿಶಾಲ ಜೋಶಿ, ಹರೀಶ ಗಾಯಕವಾಡ, ಅಶೋಕ ಚಾಂಗಲೇರಾ, ದಯಾನಂದ ರೇಕುಳಗಿ, ಸಿದ್ರಾಮ ನಾವದಗೇರಿ, ಸನ್ನಿ ಹಿಪ್ಪಳಗಾಂವ, ಗುಂಡಪ್ಪ ಕೋಟೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.