ಕೊಡಗಿನ ಜನ ಜೀವನ ಮತ್ತು ಕೃಷಿ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಆಕ್ಷೇಪಣೆ ಇಲ್ಲ ಎಂದು ಕೊಡರಹಳ್ಳಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಒಕ್ಕೋರಲಿನಿಂದ ನಿರ್ಣಯ ಕೈಗೊಳ್ಳಲಾಯಿತು.

ಸುಂಟಿಕೊಪ್ಪ: ಕೊಡಗಿನ ಜನ ಜೀವನ ಮತ್ತು ಕೃಷಿ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಆಕ್ಷೇಪಣೆ ಇಲ್ಲ ಎಂದು ಕೊಡರಹಳ್ಳಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಒಕ್ಕೋರಲಿನಿಂದ ನಿರ್ಣಯ ಕೈಗೊಳ್ಳಲಾಯಿತು.ಬುಧವಾರ ಕೊಡಗರಹಳ್ಳಿಯ ಮಹಾತ್ಮಗಾಂಧಿ ಕಾರ್ಯಾಲಯ ಸಭಾಂಗಣದಲ್ಲಿ ಕೊಡಗರಹಳ್ಳಿ ಅಂದಗೋವೆ ಮತ್ತು ಕಲ್ಲೂರು ಗ್ರಾಮಗಳನ್ನು ಒಳಗೊಂಡ ಡಾ.ಕೆ.ಕಸ್ತೂರಿ ರಂಗನ್ ವರದಿ ಜಾರಿಯ ಸಾಧಕ ಭಾದಕಗಳ ಕುರಿತು ಸಲಹೆ ಸೂಚನೆಗಳ ಬಗ್ಗೆ ವಿಶೇಷ ಗ್ರಾಮ ಸಭೆ ಕರೆಯಲಾಗಿತ್ತು.

ಪಂಚಾಯಿತಿ ಆಡಳಿತಾಧಿಕಾರಿ ವೀರಣ್ಣ ಅಧ್ಯಕ್ಷತೆ ವಹಿಸಿದ್ದು, ನೋಡಲ್ ಅಧಿಕಾರಿಯಾಗಿ ೭ನೇ ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ ಉಪಸ್ಥಿತರಿದ್ದರು.

ಮೊದಲಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಕಸ್ತೂರಿ ರಂಗನ್ ವರದಿಯ ೭ನೇ ಕರಡು ಅಧಿಸೂಚನೆಯು ೨೫೭ ಪುಟಗಳನ್ನು ಒಳಗೊಂಡಿದ್ದು, ಪುಟ ಸಂಖ್ಯೆ ೧೭೯ ರಲ್ಲಿ ಕೊಡಗು ಜಿಲ್ಲೆಯ ೫೩ ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತವೆ ನಮ್ಮ ಗ್ರಾಮ ಈ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಕೂಡ ಆನೆಕಾಡು, ದೇವರ ಕಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ದಂಚಿನ ವ್ಯಾಪ್ತಿಯಲ್ಲಿ ಬರುವುದರಿಂದ ಈ ಗ್ರಾಮ ಸಭೆಯ ಮೂಲಕ ಸಾರ್ವಜನಿಕರು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಕೋರಿದರು.

ಕಲ್ಲೂರು ನಿವಾಸಿ ಹರಿದಾಸ್ ಮಾತನಾಡಿ ಅಂದಗೋವೆ ಮತ್ತು ಕಲ್ಲೂರು ವ್ಯಾಪ್ತಿಯಲ್ಲಿ ೬೦೦ ಮನೆಗಳು ಬಡ ಮತ್ತು ಮಧ್ಯಮ ವರ್ಗ ಹಾಗೂ ತೋಟದ ಲೈನ್ ಮನೆಗಳಿದ್ದು ಸೂಕ್ಷ್ಮ ಪರಿಸರ ವಲಯವನ್ನು ಶೂನ್ಯಕ್ಕೆ ಇಳಿಸದಿದ್ದಲ್ಲಿ ಒಕ್ಕಲೆಬ್ಬಿಸುವ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದರು.ಮಾಜಿ ಸದಸ್ಯ ಲತೇಶ್ ಕುಮಾರ್ ಮಾತನಾಡಿ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ಮಾಡಿ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಜಾರಿಗೊಳಿಸಬೇಕೆ ಹೊರತು ಯಥಾವತ್ತಾಗಿ ಜಾರಿಗೊಳಿಸಲು ತಮ್ಮ ವಿರೋಧವಿದೆ ಎಂದರು.ಡಾ.ಎ.ಬಿ.ತಮ್ಮಯ್ಯ ಮಾತನಾಡಿ ಕಸ್ತೂರಿ ರಂಗನ್ ವರದಿ ೬೦೦ ಪುಟಗಳಲ್ಲಿ ವ್ಯಾಪಿಸಿದ್ದು ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ಪ್ರತಿಗಳನ್ನು ಹಂಚಬೇಕು ಮತ್ತು ಕಾಫಿ ತೋಟಗಳನ್ನು ಅರಣ್ಯವೆಂದು ಚಿತ್ರಣ ನೀಡಿರುವ ವರದಿಯನ್ನು ಒಪ್ಪಲಾಗದು ಎಂದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಮಾಡಿ ಕೃಷಿ ಮತ್ತು ಕಾಫಿ ಸೇರಿದಂತೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ ಸಹಾಯಕ ಕೃಷಿ ನಿರ್ದೇಶಕ ಮತ್ತು ಆಡಳಿತ ಅಧಿಕಾರಿ ವಿರಣ್ಣ ಮಾತನಾಡಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸರ್ಕಾರ ನಿಯಮನುಸಾರ ಕಳುಹಿಸಿಕೊಡಲಾಗುವುದೆಂದು ಮಾಹಿತಿ ನೀಡಿದರು. ಸಭೆಯಲ್ಲಿ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಗ್ರಾಮಸ್ಥರು ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.