ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಕಲಬುರಗಿಯಲ್ಲಿ ಡಿ. 7ರಂದು ನಡೆದ ವಕೀಲ ಈರಣ್ಣಗೌಡರ ಭೀಕರ ಕೊಲೆ ಖಂಡಿಸಿ, ದೌರ್ಜನ್ಯ ನಿಯಂತ್ರಣ ಕಾಯ್ದೆ ಜಾರಿಗೆ ಆಗ್ರಹಿಸಿ ಬಳ್ಳಾರಿ ವಕೀಲರ ಸಂಘದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ವಕೀಲರ ಮೇಲೆ ಆಗಾಗ್ಗೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಆದರೆ, ನಿಯಂತ್ರಣಕ್ಕೆ ಯಾವುದೇ ಕ್ರಮಗಳಾಗುತ್ತಿಲ್ಲ. ಮೈಸೂರಿನಲ್ಲಿ ಜರುಗಿದ ವಕೀಲರ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರ ಸಂರಕ್ಷಣಾ ಕಾಯ್ದೆ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಪ್ರಸ್ತಾಪಿತ ಕಾಯ್ದೆ ರಚನೆ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನ. 30ರಂದು ಚಿಕ್ಕಮಗಳೂರಿನ ವಕೀಲರಾದ ಪ್ರೀತಮ್ ಮತ್ತು ಇತರ ವಕೀಲರ ವಿರುದ್ಧ ಸುಳ್ಳು ದೂರುಗಳನ್ನು ನೋಂದಾಯಿಸಿದ ಅಧಿಕಾರಿಗಳು ಹಾಗೂ ಪ್ರೀತಮ್ ಮೇಲೆ ಹಲ್ಲೆಗೈದು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು. ರಾಜ್ಯದ ಮುಖ್ಯಮಂತ್ರಿಗಳು ವಕೀಲರ ಹಿತ ಕಾಯುವ ದೃಷ್ಟಿಯಿಂದ ಸಂರಕ್ಷಣಾ ಕಾಯ್ದೆ ರಚನೆಗೆ ಆದಷ್ಟು ಬೇಗ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ. ಎರ್ರೆಗೌಡ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕಕ್ಷಿದಾರರ ಹಿತ ಕಾಯಲು ಹಾಗೂ ನ್ಯಾಯದ ಪರವಾಗಿ ಕೆಲಸ ಮಾಡಲು ವಕೀಲರು ತೊಡಗಿಸಿಕೊಂಡಿದ್ದಾರೆ. ಆದರೆ, ವಕೀಲರ ಮೇಲೆ ಅಮಾನವೀಯವಾದ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿರುವುದು ಇಡೀ ವಕೀಲರ ವಲಯದಲ್ಲಿ ಭೀತಿಯನ್ನುಂಟು ಮಾಡಿದೆ. ಅಷ್ಟೇ ಅಲ್ಲ; ವಕೀಲರ ಕುಟುಂಬಗಳು ಸಹ ಆತಂಕಗೊಂಡಿವೆ. ಅದರಲ್ಲೂ ಕಲಬುರಗಿಯಲ್ಲಿ ವಕೀಲ ಈರಣ್ಣನವರ ಕೊಲೆ ಪ್ರಕರಣ ತೀವ್ರ ಆಘಾತ ನೀಡಿದೆ. ವಕೀಲರ ವಿರುದ್ಧ ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಕಠಿಣ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಹಳೆಯ ವಕೀಲರ ಸಂಘದ ಕಚೇರಿಯಿಂದ ಮೆರವಣಿಗೆ ಹೊರಟ ವಕೀಲರು ಪ್ರಮುಖ ಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಇದೇ ವೇಳೆ ಸಂಘಟನೆಯ ಪ್ರಮುಖರು, ವಕೀಲರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಖಂಡಿಸಿ ಮಾತನಾಡಿದರು.ವಕೀಲರ ಸಂಘದ ಕಾರ್ಯದರ್ಶಿ ಬಿ. ರವೀಂದ್ರನಾಥ್, ಉಪಾಧ್ಯಕ್ಷ ಎಂ. ನಾಗರಾಜ ನಾಯಕ್, ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ್, ಖಜಾಂಚಿ ಕೆ.ಎನ್. ವೀರೇಶ್, ಪಿ. ಬಸವರಾಜ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.