ಮಾಧುಸ್ವಾಮಿ ಸಮಿತಿಯ ವರದಿ ಜಾರಿಗೆ ಆಗ್ರಹ

| Published : Oct 24 2024, 12:37 AM IST

ಸಾರಾಂಶ

ಮಾಧುಸ್ವಾಮಿ ಸಮಿತಿಯ ವರದಿಯ ಯಥಾವತ್ ಜಾರಿಗೆ ಆಗ್ರಹಿಸಿ ಬುಧವಾರ ಹಾನಗಲ್ಲ ಪಟ್ಟಣದಲ್ಲಿ ಮಾದಿಗ ಮಹಾಸಭಾ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಹಾನಗಲ್ಲಿನ ಕುಮಾರೇಶ್ವರ ವಿರಕ್ತಮಠದಿಂದ ಆರಂಭವಾದ ಪ್ರತಿಭಟನಾಕಾರರ ಮೆರವಣಿಗೆಯಲ್ಲಿ ಮಹಾತ್ಮಾ ಗಾಂಧಿ ವೃತ್ತದ ವರೆಗೆ ತಮಟೆ ಬಾರಿಸುತ್ತ ಘೋಷಣೆಗಳನ್ನು ಕೂಗುತ್ತ ಒಳ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಯಿತು.

ಹಾನಗಲ್ಲ: ಮಾಧುಸ್ವಾಮಿ ಸಮಿತಿಯ ವರದಿಯ ಯಥಾವತ್ ಜಾರಿಗೆ ಆಗ್ರಹಿಸಿ ಬುಧವಾರ ಹಾನಗಲ್ಲ ಪಟ್ಟಣದಲ್ಲಿ ಮಾದಿಗ ಮಹಾಸಭಾ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಹಾನಗಲ್ಲಿನ ಕುಮಾರೇಶ್ವರ ವಿರಕ್ತಮಠದಿಂದ ಆರಂಭವಾದ ಪ್ರತಿಭಟನಾಕಾರರ ಮೆರವಣಿಗೆಯಲ್ಲಿ ಮಹಾತ್ಮ ಗಾಂಧಿ ವೃತ್ತದ ವರೆಗೆ ತಮಟೆ ಬಾರಿಸುತ್ತ ಘೋಷಣೆಗಳನ್ನು ಕೂಗುತ್ತ ಒಳ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಯಿತು.

ಗಾಂಧಿ ವೃತ್ತಕ್ಕೆ ಬಂದ ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಮಾದಿಗ ಮಹಾಸಭಾ ಜಿಲ್ಲಾ ಕಾನೂನು ಸಲಹೆಗಾರ ಮಹೇಶ ಹರಿಜನ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿಲ್ಲ. ಕಿಂಚಿತ್ತಾದರೂ ಸಂವಿಧಾನದ ಮೇಲೆ ಗೌರವ ಇದ್ದರೆ ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಬಳಿಕ ತಹಸೀಲ್ದಾರ್ ರೇಣುಕಾ ಎಸ್. ಅವರು ಗಾಂಧಿ ವೃತ್ತಕ್ಕೆ ಬಂದು ಮಾದಿಗ ಮಹಾಸಭಾ ಮನವಿಪತ್ರವನ್ನು ಸ್ವೀಕರಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಒಳ ಮೀಸಲಾತಿಗೆ ೬ನೇ ಗ್ಯಾರಂಟಿಯಾಗಿ ಆದ್ಯತೆ ನೀಡಿದೆ. ಈಗ ಆ.೧ರಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಳ ಮೀಸಲಾತಿ ಜಾರಿಗೆ ತರಬೇಕು. ಒಳ ಮೀಸಲಾತಿ ಜಾರಿಗೆ ಬರುವ ತನಕ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ತುಂಬಬಾರದು. ಜಾತಿಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಹುನ್ನಾರವನ್ನು ಮುಂದುವರಿಸಿದರೆ, ಗಂಭೀರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮಾದಿಗ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ರಾಜು ಹರಿಜನ, ಮುಖಂಡರಾದ ಚಂದ್ರಪ್ಪ ಹರಿಜನ, ಗುತ್ತೆಪ್ಪ ಹರಿಜನ, ಉಮೇಶ ಮಾಳಗಿ, ಫಕ್ಕೀರೇಶ ಹರಿಜನ, ನೀಲಪ್ಪ ದೊಡ್ಡಮನಿ, ಬಸವರಾಜ ಮಣ್ಣಮ್ಮನವರ, ವಿಷ್ಣು ತಳಗೇರಿ, ಸುರೇಶ ನಾಗಣ್ಣನವರ, ಮಂಜು ಸಾಂವಸಗಿ, ರಾಘು ದೊಡ್ಡಮನಿ, ನಾಗರಾಜ ಕೇಸರಿ, ಮಾರ್ತಾಂಡಪ್ಪ ಹರಿಜನ, ನಾಗರಾಜ ಹರಿಜನ, ದೇವರಾಜ ಮೇಗಳಮನಿ, ನೀಲವ್ವ ಆಯಣ್ಣನವರ, ಮುತ್ತು ಮಾದರ, ಮುಕೇಶ ಹಿರೇಬಾಸೂರ, ನಾಗಪ್ಪ ಸೋಮಸಾಗರ, ಮಹದೇವ ಮಂತಗಿ, ಪರಸಪ್ಪ ಗಡಿಯಂಕನಹಳ್ಳಿ, ಸಿದ್ಧಪ್ಪ ಬಾದಾಮಗಟ್ಟಿ, ಬಾಬು ಯಳ್ಳೂರ, ಬಸವರಾಜ ಡೊಳ್ಳೇಶ್ವರ, ಸತೀಶ ಜಾವೋಜಿ ಇದ್ದರು.