ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ಆಗ್ರಹ

| Published : Dec 19 2024, 12:30 AM IST

ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿರುವ ಎಲ್ಲ ಕಾರ್ಮಿಕರಿಗೆ ಬದುಕಿರುವಾಗಲೇ ಸಹಾಯಕ್ಕೆ ಬರುವಂತೆ ಭವಿಷ್ಯನಿಧಿ, ಪಿಂಚಣಿ, ಆರೋಗ್ಯದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.

ಹಾವೇರಿ: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ₹೩೧,೦೦೦ ಜಾರಿ ಮಾಡಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಸರ್ಕಾರವನ್ನು ಆಗ್ರಹಿಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು, ಸ್ವಚ್ಛವಾಹಿನಿ ಸಿಬ್ಬಂದಿ ಹಾಗೂ ಹಮಾಲಿ ಕಾರ್ಮಿಕರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿರುವ ಎಲ್ಲ ಕಾರ್ಮಿಕರಿಗೆ ಬದುಕಿರುವಾಗಲೇ ಸಹಾಯಕ್ಕೆ ಬರುವಂತೆ ಭವಿಷ್ಯನಿಧಿ, ಪಿಂಚಣಿ, ಆರೋಗ್ಯದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.

60 ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ಒಂದು ಲಕ್ಷ ರು. ನಿವೃತ್ತಿ ಪರಿಹಾರ (ಗ್ರಾಚ್ಯುಟಿ) ನೀಡಬೇಕು. ರಾಜ್ಯ, ಕೇಂದ್ರ ಸರ್ಕಾರದ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಎಲ್ಲ ವಸತಿರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಖಾತ್ರಿಪಡಿಸಬೇಕು. ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಗ್ರಾಪಂಗಳಲ್ಲಿ ಕೂಡಲೇ ಕೆಲಸ ಒದಗಿಸುವ ಜತೆಗೆ ಪ್ರತಿ ತಿಂಗಳು ವೇತನ ನೀಡಬೇಕು. ಈಗಾಗಲೇ ಹಲವಾರು ತಿಂಗಳು ದುಡಿದರೂ ಕೆಲವರಿಗೆ ವೇತನ ನೀಡದಿರುವುದು ಸರಿಯಲ್ಲ. ಇಲಾಖೆಯ ಆದೇಶದಂತೆ ಸ್ವಚ್ಛವಾಹಿನಿ ನೌಕರರಿಗೆ ಕೂಡಲೇ ಬಾಕಿ ವೇತನ ನೀಡಬೇಕು. ಕನಿಷ್ಠ ವೇತನ ಶೆಡ್ಯೂಲ್‌ನಲ್ಲಿ ನಿಗದಿಯಾಗಿರುವ ರೀತಿಯಲ್ಲಿ ಡ್ರೈವರ್‌ಗಳಿಗೆ ₹೧೬,೧೨೫, ಸಹಾಯಕಿಯರಿಗೆ ₹೧೫,೦೯೭ ಹಾಗೂ ಕಸ ವಿಲೇವಾರಿ ಮಾಡುವವರಿಗೆ ₹೧೦ ಸಾವಿರ ಮಾಸಿಕ ವೇತನ ನೀಡಬೇಕು. ಅಲ್ಲದೇ ಪ್ರತಿ ವರ್ಷ ನವೀಕರಣ ಪದ್ಧತಿ ಕೈಬಿಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ನೌಕರರ ಸಂಘಟನೆ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರು ಮಾತನಾಡಿ, ಗ್ರಾಪಂಗಳಲ್ಲಿ ದುಡಿಯುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಗಾರರನ್ನು ರಾಜ್ಯ ಸರ್ಕಾರ ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು. ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯರ್ಶಿ ಜಗದೀಶ ಕೋಟಿ ಮಾತನಾಡಿ, ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ₹೬೦೦೦ ಪಿಂಚಣಿ ನೀಡಬೇಕು. ಗ್ರಾಪಂ ನೌಕರರಿಗೆ ವರ್ಗಾವಣೆ ಅವಕಾಶ ಒದಗಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರ ಹುದ್ದೆಗಳನ್ನು ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಖಜಾಂಚಿ ಸುಭಾಸ್ ಸೊಟ್ಟೆಪ್ಪನವರ, ಮುಖಂಡರಾದ ಫಕ್ಕಿರೇಶ ಹಕ್ಕಿಮರೆಣ್ಣನವರ, ಆದಮ್, ಆಂಜನೇಯ, ಮಾಲತೇಶ, ಮಂಜುನಾಥ, ದಾಸಪ್ಪ, ನಾಗರಾಜ ಮಾಬುಲಿ ಬಡಿಗೇರ, ರುದ್ರಪ್ಪ ಹುಬ್ಬಳ್ಳಿ, ಎನ್.ಎನ್. ಮುಳಗುಂದ, ಬಸವರಾಜ ಬೂದಿಹಾಳ, ಬೀರಪ್ಪ ಡಿಳ್ಳೆಪ್ಪನರ, ದೀಪಾ ಕಂಬಳಿ, ಲಲಿತಾ ಹರಿಜನ, ವರದಾ, ಹೇಮಾ, ರಚನಾ ಎಚ್‌., ಲಕ್ಷ್ಮೀ ತಳವಾರ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.